ADVERTISEMENT

ಸೆಪ್ಟೆಂಬರ್ ‘ಕ್ರಾಂತಿ’ | ಸಿಎಂ ಬದಲಾವಣೆಗೆ ಹೈಕಮಾಂಡ್‌ನಿಂದ ಸೂಚನೆ ಇಲ್ಲ–ಯತೀಂದ್ರ

ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಸೆಪ್ಟೆಂಬರ್ ‘ಕ್ರಾಂತಿ’ಯದ್ದೇ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 23:57 IST
Last Updated 28 ಜೂನ್ 2025, 23:57 IST
<div class="paragraphs"><p>ಯತೀಂದ್ರ</p></div>

ಯತೀಂದ್ರ

   

ಬೆಂಗಳೂರು: ‘ಸೆಪ್ಟೆಂಬರ್ ನಂತರ ಕ್ರಾಂತಿ ಆಗಲಿದೆ’ ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ನಾನಾ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೆ, ಮುಖ್ಯಮಂತ್ರಿ ಬದಲಾವಣೆಯ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿದೆ.

ಈ ಊಹಾಪೋಹಗಳ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ತಿನ ಸದಸ್ಯ ಡಾ. ಯತೀಂದ್ರ, ‘ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮತ್ತು ಶಾಸಕರ ಬೆಂಬಲವಿದೆ. ಯಾವುದೇ ಬದಲಾವಣೆಯ ಸೂಚನೆ ಹೈಕಮಾಂಡ್‌ನಿಂದ ಬಂದಿಲ್ಲ’ ಎಂದಿದ್ದಾರೆ.

ADVERTISEMENT

‘ಕೆಲವು ಗುಂಪುಗಳು ಮುಖ್ಯಮಂತ್ರಿ ಬದಲಾಗಬೇಕೆಂಬ ಆಕಾಂಕ್ಷೆಯನ್ನು ಹೊಂದಿವೆ. ಹೀಗಾಗಿ, ಕೆಲವರು ಊಹಾಪೋಹಗಳನ್ನು ಹರಡುತ್ತಲೇ ಇದ್ದಾರೆ. ಆ ಗುಂಪು ಯಾವುದು ಎನ್ನುವುದು ನನಗೆ ಗೊತ್ತಿಲ್ಲ’ ಎಂದೂ ಯತೀಂದ್ರ ಹೇಳಿದರು.

‘ರಾಜಣ್ಣ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ. ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್ ಯಾವುದೇ ಸೂಚನೆಯನ್ನು ಕೊಟ್ಟಿಲ್ಲ. ಹೀಗಾಗಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುತ್ತಾರೆ’ ಎಂದರು.

‘ಮುಖ್ಯಮಂತ್ರಿ ಹುದ್ದೆಗೆ ಅರ್ಹತೆ ಇರುವವರು ಕಾಂಗ್ರೆಸ್‌ನಲ್ಲಿ ಅನೇಕರಿದ್ದಾರೆ. ಯಾವ ಶಾಸಕರೂ ಸರ್ಕಾರದ ವಿರುದ್ಧ ಇಲ್ಲ. ಮುಖ್ಯಮಂತ್ರಿ‌ ಬದಲಾವಣೆ ಬಗ್ಗೆಯೂ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದರು.

‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ಚನ್ನಗಿರಿಯ ಕಾಂಗ್ರೆಸ್‌ ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆಗೆ ಪ್ರತಿಕ್ರಿಯಿಸಿದ ಯತೀಂದ್ರ, ‘ಅಂತಹ ಸಣ್ಣ ಪುಟ್ಟ ಧ್ವನಿಗಳು ಇದ್ದೇ ಇರುತ್ತವೆ. ಹಾಗೆಂದು, ಯಾರೂ ಸರ್ಕಾರದ ವಿರುದ್ಧ, ಪಕ್ಷದ ವಿರುದ್ಧ ಹೋಗುವುದಿಲ್ಲ. ಹೈಕಮಾಂಡ್ ಆ ರೀತಿ ಯಾವುದೇ ತೀರ್ಮಾನ ಮಾಡಿಲ್ಲ’ ಎಂದರು.

ಸದ್ಯ ಸ್ಥಾನ ಅಭಾದಿತ:

‘ಕ್ರಾಂತಿ ಬಗ್ಗೆ ಸಚಿವ ರಾಜಣ್ಣ ಅವರನ್ನೆ ಕೇಳಬೇಕು. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆಂದು ಗೊತ್ತಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು ಅವರ ಸ್ಥಾನ ಅಭಾದಿತ. ಬದಲಿಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

‘ಸುರ್ಜೇವಾಲಾ ನನಗೇನು ತಾಕೀತು ಮಾಡಲು ಸಾಧ್ಯ?’

‘ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಇದೇ 30ರಂದು ರಾಜ್ಯಕ್ಕೆ ಬರುತ್ತಿದ್ದು ಅವರು ನನಗೇನು ತಾಕೀತು ಮಾಡುತ್ತಾರೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದರು.

‘ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆಯೇ’ ಎಂಬ ಪ್ರಶ್ನೆಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ ‘ಪಕ್ಷದ ನಾಯಕರ ಜತೆಗೆ ಸುರ್ಜೇವಾಲಾ ಚರ್ಚಿಸುತ್ತಾರೆ. ಆದರೆ ನನಗೇನು ತಾಕೀತು ಮಾಡಲು ಸಾಧ್ಯ?’ ಎಂದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ‘ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿ.ಕೆ.ಶಿವಕುಮಾರ್ ಅವರನ್ನು ಪ್ರಧಾನಿ ಇಲ್ಲವೆ ಮುಖ್ಯಮಂತ್ರಿಯನ್ನೇ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಸತೀಶ ಜಾರಕಿಹೊಳಿ ಅಧ್ಯಕ್ಷರಾಗಬಹುದು ಅಂದುಕೊಂಡಿದ್ದೇನೆ. ಎಲ್ಲವನ್ನೂ ಕಾಲವೇ ತೀರ್ಮಾನ ಮಾಡಲಿದೆ’ ಎಂದರು.

‘ನಾನು ಹೇಳಿದ ತಕ್ಷಣ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ನಡೆಯುತ್ತದೆ ಅಂದುಕೊಳ್ಳಬಾರದು. ಬಿಜೆಪಿಯಲ್ಲೂ ಕ್ರಾಂತಿ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರೇ ಬದಲಾಗಬಹುದು’ ಎಂದೂ ಅವರು ಹೇಳಿದರು.

ಕುತೂಹಲ ಮೂಡಿಸಿದ ಪರಮೇಶ್ವರ ನಡೆ

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಗೃಹ ಸಚಿವ ಜಿ. ಪರಮೇಶ್ವರ ಅವರು ರಹಸ್ಯ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಗುರುವಾರ ತಡ ರಾತ್ರಿ ಭೇಟಿ ಮಾಡಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಪರಮೇಶ್ವರ ಚರ್ಚೆ ನಡೆಸಿದ್ದರು. ಶುಕ್ರವಾರ ತಡರಾತ್ರಿ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಮುಖ್ಯಮಂತ್ರಿಯವರ ದೆಹಲಿ ಭೇಟಿ ಮತ್ತು ‘ಸೆಪ್ಟೆಂಬರ್‌ನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗಲಿದೆ’ ಎಂಬ ಸಚಿವ ರಾಜಣ್ಣ ಅವರ ಹೇಳಿಕೆಯ ಬೆನ್ನಲ್ಲೆ ಉಭಯ ನಾಯಕರನ್ನು ಪರಮೇಶ್ವರ ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಅಧಿಕಾರ ಹಂಚಿಕೆ ಚರ್ಚಿಸಿಲ್ಲ:

‘ಗೃಹಸಚಿವರು ಮಧ್ಯರಾತ್ರಿ ಬಂದು ಭೇಟಿ ಮಾಡಿದ್ದು ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯಿತೇ’ ಎಂಬ ಸುದ್ದಿಗಾರ‌ರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌ ‘ಅವರು ಭೇಟಿ ಮಾಡಿದ್ದು ನಿಜ. ಆದರೆ ಬೇರೆ ವಿಚಾರ ಚರ್ಚೆ ಮಾಡಿದೆವು. ಇಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆ ಆಗಿಲ್ಲ. ನಾವೆಲ್ಲರೂ ಸೇರಿ ಒಟ್ಟಾಗಿ ಶಿಸ್ತಿನಿಂದ ಕೆಲಸ ಮಾಡಬೇಕು. ಇದರ ಹೊರತಾಗಿ ಬೇರೆ ಯಾವುದೇ ವಿಚಾರ ಇಲ್ಲ’ ಎಂದರು.

ಸಚಿವ ರಾಜಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೊ. ಅದು ಅವರ ಅಭಿಪ್ರಾಯ ಅಷ್ಟೆ. ಅವರ ಹೇಳಿಕೆಯನ್ನು ನಿರ್ಲಕ್ಷಿಸಿ ಎಂದು ಹೇಳಿದ್ದೇನೆ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಚಿವ ಕೆ.ಎನ್. ರಾಜಣ್ಣ ನೀಡಿರುವ ‘ಸೆಪ್ಟೆಂಬರ್ ನಂತರ ಕ್ರಾಂತಿ’ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜಣ್ಣ ಅವರನ್ನೇ ಕೇಳಿ. ಈ ಮಾತನ್ನು ನಾನು ಒಪ್ಪುವುದಿಲ್ಲ.
- ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.