ADVERTISEMENT

ಅಂಗನವಾಡಿ ನೌಕರರ ಕುಟುಂಬಕ್ಕೂ ಸಿಗದ ವಿಮೆ

ಕೋವಿಡ್‌ನಿಂದ ಮೃತಪಟ್ಟ 26 ಅಂಗನವಾಡಿ ನೌಕರರಲ್ಲಿ ಒಬ್ಬರಿಗೆ ಮಾತ್ರ ನೆರವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 17:10 IST
Last Updated 13 ಫೆಬ್ರುವರಿ 2021, 17:10 IST
ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದ ಅಂಗನವಾಡಿ ನೌಕರರು
ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದ ಅಂಗನವಾಡಿ ನೌಕರರು    

ಬೆಂಗಳೂರು: ಕರ್ತವ್ಯದ ವೇಳೆ ಕೋವಿಡ್‌ ತಗುಲಿ ಮೃತಪಟ್ಟ 26 ಅಂಗನವಾಡಿ ನೌಕರರಲ್ಲಿ ಒಬ್ಬರ ಕುಟುಂಬಕ್ಕೆ ಮಾತ್ರ ಸರ್ಕಾರ ಈವರೆಗೆ ₹30 ಲಕ್ಷ ವಿಮಾ ಪರಿಹಾರ ಪಾವತಿಸಿದೆ. ಉಳಿದ 25 ಕುಟುಂಬದವರು ಪರಿಹಾರಕ್ಕಾಗಿ ಕಚೇರಿ ಸುತ್ತುವುದು ಮಾತ್ರ ತಪ್ಪಿಲ್ಲ.

ಕೋವಿಡ್ ನಿಯಂತ್ರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನೇ ಸರ್ಕಾರ ನಿಯೋಜನೆ ಮಾಡಿಕೊಂಡಿತ್ತು. ಕರ್ತವ್ಯದ ವೇಳೆ ಸೋಂಕು ತಗುಲಿದರಲ್ಲಿ ಬಹುತೇಕರು ಚೇತರಿಸಿಕೊಂಡರು. ಆದರೆ, 18 ಅಂಗನವಾಡಿ ಕಾರ್ಯಕರ್ತೆಯರು ಮತ್ತು 8 ಸಹಾಯಕಿಯರು ಮೃತಪಟ್ಟರು.

ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಮನಗರ ಮತ್ತು ರಾಯಚೂರು ಜಿಲ್ಲೆಗಳನ್ನು ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಒಬ್ಬರಾದರೂ ಅಂಗನವಾಡಿ ನೌಕರರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯವರೇ ನಾಲ್ವರು.

ADVERTISEMENT

ಬಹುತೇಕ ಎಲ್ಲರೂ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲೇ ಸಾವಿಗೀಡಾಗಿದ್ದಾರೆ. ಆರೇಳು ತಿಂಗಳು ಕಳೆದರೂ ವಿಮಾ ಪರಿಹಾರ ನೀಡದಿರುವುದು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಕೋವಿಡ್‌ ನಿಯಂತ್ರಿಸುವ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ವಿಮಾ ಪರಿಹಾರ ನೀಡದೆ ಸರ್ಕಾರ ಅವರ ಕುಟುಂಬದವರನ್ನು ಕಾಡಿಸುತ್ತಿದೆ. ಕೊರೊನಾ ಯೋಧರು ಎಂದು ಬಾಯಿಮಾತಿಗೆ ಕರೆದರೆ ಪ್ರಯೋಜನ ಏನು’ ಎಂದು ಕುಟುಂಬ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳುವ ಮುನ್ನ ವಿಮಾ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರಭರವಸೆ ನೀಡಿತ್ತು. ಕೋವಿಡ್‌ ಯೋಧರಾಗಿ ಪ್ರಾಣವನ್ನೂ ಲೆಕ್ಕಿಸದೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದುಡಿದರು. ಆದರೆ, ಈಗ ಅವರಿಗೆ ವಿಮಾ ಪರಿಹಾರ ಕೊಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದವರಲ್ಲಿ ಕೋವಿಡ್ ತಗುಲದಿದ್ದರೂ ಕಾರ್ಯ ಒತ್ತಡದಿಂದ ವಿವಿಧ ಖಾಯಿಲೆಗಳಿಗೆ ತುತ್ತಾಗಿ ಇನ್ನೂ 35 ಅಂಗನವಾಡಿ ನೌಕರರು ಮೃತಪಟ್ಟಿದ್ದಾರೆ. ಇವರ ತ್ಯಾಗವನ್ನು ಸರ್ಕಾರ ಪರಿಗಣಿಸದೆ ಪರಿಹಾರಕ್ಕೆ ಅಲೆದಾಡಿಸುತ್ತಿರುವುದು ಸರಿಯಲ್ಲ. ಕೂಡಲೇ ವಿಮಾ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಇಲಾಖೆ ನಿರ್ದೇಶಕ ಪೆದ್ದಪ್ಪಯ್ಯ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.