ADVERTISEMENT

ಸಿ.ಎಂ ಆಗುವ ಆತುರವಿಲ್ಲ: ಡಿಕೆಶಿ

‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಷ್ಟೇ ನನ್ನ ಮೊದಲ ಗುರಿಯಾಗಿದೆ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:36 IST
Last Updated 23 ಜೂನ್ 2021, 19:36 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಮುಖ್ಯಮಂತ್ರಿ ಆಗುವ ಆತುರದಲ್ಲಿ ನಾನಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ’ ಎಂದುಪುನರುಚ್ಚರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲು ನನ್ನನ್ನು ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ ಎಂದು ನಾನೇ ಹೇಳಿದ್ದೇನೆ’ ಎಂದರು.

ಶಾಸಕ ರಾಮಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಮುಖ್ಯಮಂತ್ರಿ ಆಗಬೇಕೆಂದು ನಾನು ಯಾವತ್ತಾದರೂ ಹೇಳಿದ್ದೀನಾ? ಯಾರ‍್ಯಾರು ಏನೇನು ಸಲಹೆ ಕೊಡುತ್ತಾರೊಕೊಡಲಿ. ಅದನ್ನು ಸ್ವೀಕರಿಸೋಣ’ ಎಂದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ಸಮಸ್ಯೆಗೂ, ಕಾಂಗ್ರೆಸ್ ವಿಚಾರಕ್ಕೂ ಬಹ
ಳಷ್ಟು ವ್ಯತ್ಯಾಸವಿದೆ. ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ನಮ್ಮ ಪೈಪೋಟಿ ಏನಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಅದಕ್ಕೆ ನಾವು ಸಮಯ ನೀಡಬೇಕು. ಅದನ್ನು ಬಿಟ್ಟು ಬೇರೆ ವಿಚಾರಕ್ಕೆಸಮಯ ನೀಡುವುದು ವ್ಯರ್ಥ’ ಎಂದರು.

ADVERTISEMENT

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೌದಾ..? ಬಹಳ ಸಂತೋಷ’ ಎಂದಷ್ಟೆ ಪ್ರತಿಕ್ರಿಯಿಸಿದರು.

‘ಶಾಸಕರ ಇಂಥ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಆಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ಪಕ್ಷದ ಹೈಕಮಾಂಡ್‌ಗೆ ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ’ ಎಂದರು.

ಸಿದ್ದರಾಮಯ್ಯ ಪರ ಹೈಕಮಾಂಡ್‌ ಭೇಟಿ: ಅಖಂಡ ಶ್ರೀನಿವಾಸ ಮೂರ್ತಿ

‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್ 130ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ. ಸಿದ್ದರಾಮಯ್ಯ ಅವರ ಪರವಿರುವ ಕಾಂಗ್ರೆಸ್ ನಾಯಕರೆಲ್ಲ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒತ್ತಡ ಹೇರುತ್ತೇವೆ’ ಎಂದು ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.

‘ಯಾರೂ ಗೊಂದಲ ಸೃಷ್ಟಿಬೇಡಿ’ ಎಂದು ಹೈಕಮಾಂಡ್‌ ಎಚ್ಚರಿಕೆ ನೀಡಿದ ಬಳಿಕವೂ ಧ್ವನಿ ಎತ್ತಿದ ಶ್ರೀನಿವಾಸ ಮೂರ್ತಿ, ‘ಜನರು ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರು’ ಎಂದರು. ನನ್ನ ಮನೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದ ಬಗ್ಗೆ ಪಕ್ಷದ ಉಸ್ತುವಾರಿಯನ್ನು ಭೇಟಿ ಮಾಡಿ ವಿವರಿಸಿದ್ದೇನೆ. ಮಾಜಿ ಮೇಯರ್‌ ಸಂಪತ್ ರಾಜ್ ವಿರುದ್ಧ ದೂರು ಕೊಟ್ಟಿದ್ದೇನೆ. ನಮ್ಮ ವಿರೋಧಿಗಳನ್ನು ಜೊತೆ ಸೇರಿಸಿಕೊಂಡುಡಿ.ಕೆ. ಶಿವವಕುಮಾರ್‌ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ, ಜಮೀರ್ ನನ್ನ ಪರ ಇದ್ದಾರೆ’ ಎಂದರು.

‘ಅಧಿಕಾರಕ್ಕೆ ಜೋತು ಬಿದ್ದವರಿಂದ ಗೊಂದಲ’

‘ನಿಜವಾದ ಕಾಂಗ್ರೆಸ್ಸಿಗರು ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆ. ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದಿರುವವರು, ಅಧಿಕಾರಕ್ಕೆ ಜೋತು ಬಿದ್ದಿರುವವರು ಗೊಂದಲ ಸೃಷ್ಟಿಸುತ್ತಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಹೇಳಿದರು.

‘ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು, ಅಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ವರಿಷ್ಠರು ಅದನ್ನು ನೋಡಿಕೊಳ್ಳುತ್ತಾರೆ’ ಎಂದರು.

‘ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿಯೂ ಇಲ್ಲ. ಕಾಂಗ್ರೆಸ್‌ನ ಈಗಿನ ಶಾಸಕರು ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. 2023ರ ಚುನಾವಣೆ ಗೆಲ್ಲುವ ಬಗ್ಗೆ ಶಾಸಕರು ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಕೆಲವರು ಈಗಲೇ ಮುಖ್ಯಮಂತ್ರಿ ಆಗುವುದಾದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.