ADVERTISEMENT

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಆರಗ

ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 17:23 IST
Last Updated 30 ಮಾರ್ಚ್ 2022, 17:23 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ    

ಬೆಂಗಳೂರು: ‘ಪಿಎಸ್‌ಐಗಳ ನೇಮಕಾತಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಹೈದರಾಬಾದ್‌ ಕರ್ನಾಟಕ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಅರವಿಂದ ಕುಮಾರ್‌ ಅರಳಿ ಅವರು ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ಪ್ರಕಟವಾದ ಅಂಶಗಳನ್ನು ಉಲ್ಲೇಖಿಸಿ, ‘ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ. ಒಂದೇ ಜಿಲ್ಲೆಯ ಒಂದೇ ಕೇಂದ್ರದವರು ಆಯ್ಕೆಯಾಗಿದ್ದಾರೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಕೇಂದ್ರದಲ್ಲಿ ಎಷ್ಟು ಜನ ಆಯ್ಕೆಯಾಗಿದ್ದಾರೆ ಎನ್ನುವ ಬಗ್ಗೆ ಸಮಗ್ರವಾದ ವಿವರ ನೀಡಲು ಸಿದ್ಧ. ಪರೀಕ್ಷೆಯಲ್ಲಿ ಬ್ಲ್ಯೂಟೂತ್‌ ಬಳಸಿ ಅಕ್ರಮ ನಡೆಸಲು ಯತ್ನಿಸುತ್ತಿದ್ದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ. ಬೆಳಗಾವಿ, ಕಲಬುರಗಿಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಆದರೆ, ಪರೀಕ್ಷೆಯಲ್ಲಿ ಬ್ಲ್ಯೂಟೂತ್‌ ಬಳಕೆಯಾಗಿಲ್ಲ.ಕೇಂದ್ರದ ಸುತ್ತ ಎರಡು ಹಂತದ ಬಿಗಿ ಕಾವಲು ಇತ್ತು. ಹೀಗಾಗಿ, ಯಾವುದೇ ರೀತಿಯ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂದು ಆ ಭಾಗದ ವಿಧಾನಸಭಾ ಮತ್ತು ವಿಧಾನ ಪರಿಷತ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಈ ಬಗ್ಗೆ ಪರಿಶೀಲಿಸಲು ನೇಮಕಾತಿ ಪಟ್ಟಿಗೆ ತಡೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.