ADVERTISEMENT

ಲಾಕ್‌ಡೌನ್‌ ಇಲ್ಲ, ಮಾಸ್ಕ್‌ ಧರಿಸಿ, ಅಂತರ ಕಾಪಾಡಿ: ಜನರಿಗೆ ಸಿಎಂ ಸಂದೇಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:45 IST
Last Updated 21 ಜುಲೈ 2020, 19:45 IST
ಸಿಎಂ ಬಿ.ಎಸ್‌ ಯಡಿಯೂರಪ್ಪ
ಸಿಎಂ ಬಿ.ಎಸ್‌ ಯಡಿಯೂರಪ್ಪ    

ಬೆಂಗಳೂರು: ರಾಜ್ಯದಲ್ಲಿ ಲಾಕ್‌ ಡೌನ್‌ ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಎಲ್ಲರೂ, ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಪಾಡಿ ಕೋವಿಡ್‌ ಅನ್ನು ನಿಯಂತ್ರಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರು ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.

ಕೋವಿಡ್‌ ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿ ಮಂಗಳವಾರ ಸಂಜೆ 5 ಗಂಟೆಗೆ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.ಪ್ರಾರಂಭದ ದಿನಗಳಲ್ಲಿ ಕರ್ನಾಟಕ ಕೋವಿಡ್‌ ಅನ್ನುಯಶಸ್ವಿಯಾಗಿ ನಿಯಂತ್ರಿಸಿತ್ತು.ಆದರೆ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಹೆಚ್ಚುತ್ತಿದೆ.ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಜನತೆ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು.ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಆಗ ಮಾತ್ರ ಕೋವಿಡ್‌ ನಿಯಂತ್ರಣ ಸಾಧ್ಯ ಎಂದು ಸಿಎಂ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ಪೀಡಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು.

ADVERTISEMENT

ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು ಜೀವದ ಹಂಗನ್ನೇ ತೊರೆದು ಜನರಿಗಾಗಿ ಶ್ರಮಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನತೆ ಜವಾಬ್ದಾರಿ ಮೆರೆಯಬೇಕು. ಆರೋಗ್ಯ ಮಾರ್ಗಸೂಚಿಗಳನ್ನು ಜನತೆ ಪಾಲಿಸಲೇಬೇಕು. ಆಗ ಮಾತ್ರ ಕೋವಿಡ್‌ ನಿಯಂತ್ರಣ ಸಾಧ್ಯ ಎಂದು ಸಿಎಂ ಅಭಿಪ್ರಾಯಪಟ್ಟರು.

5ಟಿ ತಂತ್ರ : Testing, Tracing, Tracking, Treatment and Technology ( ಪರೀಕ್ಷಿಸುವುದು, ಪತ್ತೆ ಮಾಡುವುದು, ಮಾಹಿತಿ ಕಲೆ ಹಾಕುವುದು, ಚಿಕಿತ್ಸೆ ನೀಡುವುದು, ತಂತ್ರಜ್ಞಾನ ಬಳಸಿಕೊಳ್ಳುವುದು) ಈ ಸೂತ್ರವನ್ನು ಅನುಸರಿಸಲು ತಜ್ಞರು ಸಲಹೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.

‘ಸಂಪನ್ಮೂಲ ಸಂಗ್ರಹಣೆಯೂ ಅಗತ್ಯ’

ಕೋವಿಡ್‌ ನಿರ್ವಹಣೆಯ ಜತೆಗೆ ರಾಜ್ಯದ ಆರ್ಥಿಕ ಸ್ಥಿತಿಯನ್ನೂ ಸುಧಾರಿಸಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿದರು.

‘ರಾಜ್ಯವನ್ನು ನಾವು ಲಾಕ್‌ಡೌನ್‌ ಮಾಡಿಕೊಂಡು ಕೂರುವ ಸ್ಥಿತಿ ಇಲ್ಲ. ಸಂಪನ್ಮೂಲವನ್ನು ಸಂಗ್ರಹಿಸಬೇಕಾಗಿದೆ’ ಎಂದು ಅವರು ತಿಳಿಸಿದರು.

‘ಆರಂಭದಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ಇತ್ತು. ಬೇರೆ ರಾಜ್ಯಗಳಿಂದ ಬರುವವರು ಹೆಚ್ಚಾದ ಬಳಿಕ ಇಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಯಿತು. ಅದನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು’ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಸ್ವತಂತ್ರರು:‘ಕೋವಿಡ್‌ ನಿರ್ವಹಣೆಗಾಗಿ ಖರೀದಿಸಿದ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಲ್ಲ ದಾಖಲೆಗಳ ನೋಡಬಹುದು. ದಾಖಲೆ ಪರಿಶೀಲಿಸುವ ಸ್ವಾತಂತ್ರ್ಯ ಅವರಿಗಿದೆ. ಒಂದು ವೇಳೆ ಯಾವುದೇ ಮಾಹಿತಿ ಕೇಳಿದರೂ ಕಳಿಸಿಕೊಡಲು ಸಿದ್ಧನಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು.

‘ವಿರೋಧಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳಿಂದ ಜನರಲ್ಲಿ ಗೊಂದಲ ಮೂಡುತ್ತಿದೆ. ಎಲ್ಲ ಉಪಕರಣಗಳ ಖರೀದಿಯೂ ಪಾರದರ್ಶಕವಾಗಿದೆ. ಯಾವುದೇ ಮುಚ್ಚುಮರೆ ಇಲ್ಲ. ಯಾವುದೇ ಮಾಹಿತಿಯನ್ನು 24 ಗಂಟೆಗಳಲ್ಲಿ ಕೊಡಲು ಸಿದ್ಧರಿದ್ದೇವೆ. ರಾಜ್ಯ ಸಂಕಷ್ಟದಲ್ಲಿ ಇದ್ದಾಗ ಟೀಕೆ ಟಿಪ್ಪಣಿ ಮಾಡುವುದು ಬಿಟ್ಟು, ಎಲ್ಲರೂ ಜನರ ಒಳಿತಿಗಾಗಿ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಲಿ’ ಎಂದೂ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.