ADVERTISEMENT

ವೈನ್‌ ಟೂರಿಸಂ ಕೈಬಿಟ್ಟ ದ್ರಾಕ್ಷಾರಸ ಮಂಡಳಿ

ಕಲಾವತಿ ಬೈಚಬಾಳ
Published 12 ಜನವರಿ 2019, 19:34 IST
Last Updated 12 ಜನವರಿ 2019, 19:34 IST
   

ಬೆಂಗಳೂರು: ಮೊದಲ ಬಾರಿಗೆ ವೈನ್‌ ಟೂರಿಸಂ ನಡೆಸಲು ನಿರ್ಧರಿಸಿದ್ದ ರಾಜ್ಯ ದ್ರಾಕ್ಷಾರಸ ಮಂಡಳಿ ಸದ್ಯಕ್ಕೆ ಈ ಯೋಜನೆಯಿಂದ ಹಿಂದೆ ಸರಿದಿದೆ.

ವೈನ್‌ ಬಳಕೆ, ಉತ್ತೇಜನ, ಅದರ ಬಗ್ಗೆ ಅರಿವು ಮತ್ತು ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದವೈನ್‌ ಟೂರಿಸಂ ನಡೆಸಲು ಮಂಡಳಿ ಉದ್ದೇಶಿಸಿತ್ತು.

ಮಂಡಳಿಯಿಂದ ನಡೆಸದೇ ಇದ್ದರೂ ಖಾಸಗಿ ವೈನ್‌ ಉತ್ಪಾದನಾ ಘಟಕಗಳ (ವೈನರಿ) ಸಹಯೋಗದಲ್ಲಿ ಬೆಂಗಳೂರಿನಲ್ಲಿ ವೈನ್ ಟೂರಿಸಂ ನಡೆಸಲು ಸಿದ್ಧತೆ ನಡೆಸಿದೆ.

ADVERTISEMENT

‘ದ್ರಾಕ್ಷಿ ಬೆಳೆಯುವ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ, ವೈನರಿ ಜನವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ವೈನ್‌ ಪ್ರಿಯರನ್ನು ಕರೆದೊಯ್ಯುವ ಮೂಲಕಟೂರಿಸಂ ನಡೆಸಲುತೀರ್ಮಾನಿಸಲಾಗಿತ್ತು. ಆದರೆ, ನಿರ್ವಹಣೆ ಅಸಾಧ್ಯವಾಗಿದ್ದರಿಂದ ಇದನ್ನು ಕೈಬಿಡಲಾಗಿದೆ’ಎಂದು ರಾಜ್ಯ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ‘ಪ್ರಜಾವಾಣಿ’ಗೆ ತಿಳಿಸಿದರು.

‘ದ್ರಾಕ್ಷಿ ಕೈಗೆ ಬರುವ ಸಮಯದಲ್ಲಿ ವಿಜಯಪುರದಲ್ಲಿ ದ್ರಾಕ್ಷಾರಸ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಸಲಿದ್ದೇವೆ. ಬೆಂಗಳೂರಿನಲ್ಲಿ ಖಾಸಗಿ ವೈನರಿಗಳಿಗೆ ಸಹಯೋಗ ನೀಡುವ ಮೂಲಕ ಟೂರಿಸಂ ನಡೆಸಲಿದ್ದೇವೆ’ ಎಂದರು.

ನಗರದ ಜನತೆಗೆ ವೈನ್‌ ದ್ರಾಕ್ಷಿ ಬೆಳೆ, ವೈನ್‌ ಉತ್ಪಾದನೆ, ಬಳಕೆ, ಜಾಗೃತಿ ಮೂಡಿಸುವುದು ಟೂರಿಸಂನ ಮುಖ್ಯ ಉದ್ದೇಶ. ಹಾಗಾಗಿ, ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಭೇಟಿ ನೀಡುವ ಬದಲು, ಬೆಂಗಳೂರಿನಲ್ಲಿಯೇ ಟೂರಿಸಂ, ಕಾರ್ಯಾಗಾರ ನಡೆಯಲಿದೆ.

ನಗರದಲ್ಲಿನ ಖಾಸಗಿ ವೈನರಿಗಳು ಆಸಕ್ತರಿಂದನಿಗದಿತ ಶುಲ್ಕ ಸಂಗ್ರಹಿಸಿ ವೈನ್‌ ಟೂರ್‌ ಆಯೋಜಿಸುತ್ತವೆ. ಹಾಗಾಗಿ, ಅವರನ್ನೆಲ್ಲ ಒಂದೆಡೆ ಸೇರಿಸಿ ಟೂರಿಸಂ ಮತ್ತು ಕಾರ್ಯಾಗಾರ ನಡೆಸಲು ಮಂಡಳಿ ಮುಂದಾಗಿದೆ. ಇಲ್ಲಿ ವೈನರಿಗಳು ತಮ್ಮ ಬ್ರಾಂಡ್‌ಗಳ ಪ್ರದರ್ಶನ ಮತ್ತು ವ್ಯಾಪಾರ ವಹಿವಾಟು ನಡೆಸುತ್ತವೆ.

‘ಟೂರಿಸಂ ನಡೆಸುವ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಜಾಹೀರಾತಿನ ಮೂಲಕ ವೈನ್‌ ಪ್ರಿಯರಿಗೆ ಮಾಹಿತಿ ನೀಡಿಲಿದ್ದೇವೆ. ರಾಜ್ಯದೆಲ್ಲೆಡೆಯ ಜನ ಭಾಗವಹಿಸಬಹುದು’ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದರು.

‘ವಿಜಯಪುರದಲ್ಲಿ ವೈನರಿ ಆರಂಭ’

‘ರಾಜ್ಯದಲ್ಲಿ ಮಂಡಳಿ ವತಿಯಿಂದ ಈ ತನಕ ಒಂದು ವೈನರಿಯೂ ಆರಂಭವಾಗಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ವೈನರಿ ಆರಂಭಿಸಲು ನಿರ್ಧರಿಸಲಾಗಿದ್ದು, ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ’ಎಂದು ಸೋಮು ಹೇಳಿದರು.

‘ಯೋಜನೆಗೆ ನಬಾರ್ಡ್‌ ಅನುಮತಿ ಸಿಗುವುದೊಂದು ಬಾಕಿ ಇದೆ.ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ವೈನ್‌ ದ್ರಾಕ್ಷಿ ಹೆಚ್ಚಾಗಿ ಉತ್ಪಾದನೆಯಾಗುವುದರಿಂದ ಇಲ್ಲಿ ವೈನರಿ ಆರಂಭಿಸಲು ಸೂಕ್ತವಾಗಿದೆ. ಹಾಗಾಗಿ,ಅನುಮತಿ ದೊರೆತ ನಂತರ ಅಲ್ಲಿಯೆ ವೈನರಿ ಆರಂಭಿಸಲಿದ್ದೇವೆ ಎಂದರು’.

ಜನರಲ್ಲಿ ವೈನ್‌ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಈ ಟೂರಿಸಂ, ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
-ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ದ್ರಾಕ್ಷಾರಸ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.