ADVERTISEMENT

ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 7:48 IST
Last Updated 14 ಮೇ 2021, 7:48 IST
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ   

ಬೆಂಗಳೂರು: ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ, ನ್ಯಾಯಾಂಗದ ಬಗ್ಗೆ ನಮಗೆ ಸದಾ ಗೌರವವಿದೆ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಯಾವ ಪಕ್ಷ ನ್ಯಾಯಾಲಯದ ತೀರ್ಪಿನ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ್ಯಹರಣ ಮಾಡಿತ್ತೋ, ಅದೇ ಪಕ್ಷ ಇಂದುಏಕಾಏಕಿ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವನ್ನು ಕುಟುಕಿದ್ದಾರೆ.

ಮುಂದುವರಿದು, ಯಾವ ಪಕ್ಷವು ನ್ಯಾಯಾಲಯಗಳು ಮೋದಿಯ ಆಲಯಗಳಾಗಿವೆ ಎಂದು ಆರೋಪಿಸಿ ಸಿಎಎ, ರಾಮ ಮಂದಿರ ತೀರ್ಪಿನ ವಿರುದ್ಧ ಅಪಪ್ರಚಾರ ಮಾಡಿತ್ತೋ, ಅದು ಈಗ ನ್ಯಾಯಾಲಯಗಳ ಪರವಾಗಿ ಗೌರವ ವ್ಯಕ್ತಪಡಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಮಾನ್ಯ ಸಿದ್ದರಾಮಯ್ಯನವರೇ ಮತ್ತುದಿನೇಶ್‌ ಗುಂಡೂರಾವ್‌ ಅವರೇಏನಂತಿರಾ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ,ಅಷ್ಟಕ್ಕೂ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾದರೂ ಏನು? ನ್ಯಾಯಾಧೀಶರೇನು ಸರ್ವಜ್ಞರಲ್ಲ. ಅವರೂ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ನಿರ್ದೇಶನ ನೀಡುತ್ತಾರೆ ಎಂದಿದ್ದೇನೆ. ಸರ್ವೋಚ್ಚ ನ್ಯಾಯಾಲಯವೂ ಇದನ್ನೇ ಹೇಳಿದೆ. ಇದರಲ್ಲಿ ತಪ್ಪೇನಿದೆ?ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವದವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಪಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದೆ. ಆಮ್ಲಜನಕ ಮತ್ತು ಲಸಿಕೆ ಕೊರತೆಯ ಸಮಸ್ಯೆಯಿಂದಾಗಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.ಹೀಗಾಗಿ ಸಾರ್ವಜನಿಕರುಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ ಕೂಡ ಸರ್ಕಾರಕ್ಕೆ ಚಾಟಿ ಬೀಸಿತ್ತು.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ ಎಂದು ಹೇಳಿಕೆ ನೀಡಿದ್ದರು. ಈ ಮಾತಿಗೆ ಧ್ವನಿಗೂಡಿಸಿದ್ದಸಿ.ಟಿ.ರವಿ, ನ್ಯಾಯಾಧೀಶರೇನು ಸರ್ವಜ್ಞರಲ್ಲ. ಕೇಂದ್ರವಿರಲಿ, ರಾಜ್ಯವಿರಲಿ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಸುಪ್ರೀಂಕೋರ್ಟ್‌ಗೂ ಕೇಂದ್ರ ಸರ್ಕಾರ ಈ ವಿಚಾರವನ್ನು ಹೇಳಿದೆ. ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್‌ ಕೂಡಾ ಒಪ್ಪಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.