ADVERTISEMENT

‘ಬರ್ತ್ ಹೋಂ‘ನಲ್ಲಿ ಸೋಂಕು ಭಯವಿಲ್ಲ

ಮನೆ ವಾತಾವರಣದಲ್ಲಿ ಸಹಜ ಹೆರಿಗೆ ಮಾಡಿಸುವ ಕೇಂದ್ರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 21:05 IST
Last Updated 26 ಏಪ್ರಿಲ್ 2020, 21:05 IST
ಸ್ನೇಹಾ, ಚೇತನಾ, ಮೇಘನಾ
ಸ್ನೇಹಾ, ಚೇತನಾ, ಮೇಘನಾ   

ಬೆಂಗಳೂರು: ಕೊರೊನಾ ಸೋಂಕಿನ ಕಾರಣದಿಂದಾಗಿ ತುಂಬು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗಲು ಭಯಪಡುತ್ತಿರುವ ಸಂದರ್ಭದಲ್ಲಿ ಸಹಜ ಹೆರಿಗೆಗೆ ಪ್ರಸಿದ್ಧಿಯಾಗಿರುವ ‘ಬರ್ತ್‌ ಹೋಂ’, ತಮ್ಮ ಕೇಂದ್ರದಲ್ಲಿ ಮನೆಯಲ್ಲಿನ ವಾತಾವರಣ ನಿರ್ಮಾಣ ಮಾಡಿ, ಸೂಲಗಿತ್ತಿಯರಿಂದ ಸಹಜ ಹೆರಿಗೆ ಮಾಡಿಸಲು ಮುಂದಾಗಿದೆ.

‘ಬರ್ತ್‌ ಹೋಂ’‌ ಸೂಲಗಿತ್ತಿ ಆಧಾರಿತ, ಸಹಜ ಹೆರಿಗೆ ಕೇಂದ್ರ. ಇದು ಜೆ.ಪಿ ನಗರದ ಮೂರನೇ ಹಂತದಲ್ಲಿದೆ.2018ರ ಆಗಸ್ಟ್‌ ತಿಂಗಳಿನಲ್ಲಿ ಮೇಘನಾ, ಸ್ನೇಹಾ, ಚೇತನಾ ಹಾಗೂ ಶಗುಪ್ತಾ ಎಂಬ ನಾಲ್ವರು ಮಹಿಳೆಯರು ಸೇರಿ ಈ ಕೇಂದ್ರ ಆರಂಭಿಸಿದರು. ಈ ಕೇಂದ್ರದಲ್ಲಿ ಜರ್ಮನಿಯ ಜೆನ್ನಿಫರ್‌ ಎಂಬುವವರು ಮುಖ್ಯ ಸೂಲಗಿತ್ತಿ. ಇವರು ಜರ್ಮನಿಯ ಟುಬಿಂಗೆನ್‌ನ ಮಿಡ್‌ವೈಫರಿ ಸ್ಕೂಲ್‌ ಆಫ್‌ ದ ಯುನಿವರ್ಸಿಟಿ ವಿಮೆನ್ಸ್‌ ಹಾಸ್ಪಿಟಲ್‌ನಿಂದ‘ಸರ್ಟಿಫೈಡ್‌ ಮಿಡ್‌ವೈಫ್’‌ ಕೋರ್ಸ್‌ ಮುಗಿಸಿದ್ದಾರೆ. ಜೆನ್ನಿಫರ್‌ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಗರ್ಭಿಣಿಯರನ್ನು ಮಾತನಾಡಿಸುತ್ತಾ, ಸಮಾಧಾನ ಹೇಳುತ್ತಾ ಸಾವಕಾಶವಾಗಿ ಹೆರಿಗೆ ಮಾಡಿಸುತ್ತಾರಂತೆ.

ಈ ಕೇಂದ್ರದಲ್ಲಿ ಅವರ ಜೊತೆ ಅನುಭವೀ ಸೂಲಗಿತ್ತಿಯರು ಹಾಗೂ ಶುಶ್ರೂಷಕರು ಕೆಲಸ‌ ಮಾಡುತ್ತಿದ್ದಾರೆ. ಇಲ್ಲಿವೈದ್ಯರಂತೆಯೇ ವೈಜ್ಞಾನಿಕ ವಿಧಾನದಲ್ಲಿಯೇ ಹೆರಿಗೆ ಮಾಡಿಸುತ್ತಾರೆ. ಈ ಕೇಂದ್ರದಲ್ಲಿ ದಿನಕ್ಕೆ ಒಬ್ಬ ಅಥವಾ ಇಬ್ಬರು ಗರ್ಭಿಣಿಯರು ಹೆರಿಗೆಗೆ ಬರುತ್ತಾರೆ. ಗರ್ಭಿಣಿಯರು ಹೊರತುಪಡಿಸಿ ಬೇರೆ ಯಾವ ರೋಗಿಗಳು ಈ ಕೇಂದ್ರಕ್ಕೆ ಬರುವುದಿಲ್ಲ.

ADVERTISEMENT

ಸುರಕ್ಷತೆಗೆ ಆದ್ಯತೆ
‘ಮಾಸ್ಕ್‌, ಗ್ಲೌಸ್‌, ಪಿಪಿಇ ಕಿಟ್‌ ಕಡ್ಡಾಯವಾಗಿ ಬಳಸುತ್ತಾರೆ. ನಿರಂತರವಾಗಿ ಸ್ವಚ್ಛತೆ ಕಾಪಾಡುತ್ತಾರೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಇಲ್ಲಿ ಕೋವಿಡ್‌– 19 ಸೋಂಕು ಭಯವಿಲ್ಲ‘ ಎಂದು ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಹಾಗೂ ಈ ಕೇಂದ್ರದ ಸ್ಥಾಪಕರಲ್ಲಿ ಒಬ್ಬರಾದ ಚೇತನಾ ಹೇಳುತ್ತಾರೆ.

ಇಲ್ಲಿ ಜೆನ್ನಿಫರ್‌ಗೆ ಸಹಾಯಕಿಯರಾಗಿ ಮೇಘನಾ, ಸ್ನೇಹಾ, ಚೇತನಾ ಹಾಗೂ ಶಗುಪ್ತಾ ಕೆಲಸ ಮಾಡುತ್ತಿದ್ದಾರೆ. ಎಲ್ಲರೂಚೈಲ್ಡ್‌ ಬರ್ತ್‌ ಎಜುಕೇಷನ್‌ ಕೋರ್ಸ್ ಮಾಡಿದವರು. ‘ಇಲ್ಲಿ ಸಹಜ ಹೆರಿಗೆಗೆ ಒತ್ತು ನೀಡಲಾಗುತ್ತದೆ. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಂತಹ ಹೈ ರಿಸ್ಕ್‌ ಪ್ರೆಗ್ನೆನ್ಸಿಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡಿಸುವುದಿಲ್ಲ’ ಎನ್ನುತ್ತಾರೆ ಚೇತನಾ.

ಇತರ ಸೇವೆಗಳು
ಈ ಕೇಂದ್ರದಲ್ಲಿ ಗರ್ಭೀಣಿಯರಿಗೆ ಹೆರಿಗೆ ವೇಳೆ ಮಲಗುವ ಭಂಗಿ, ಗರ್ಭಿಣಿ ಪತ್ನಿಯ ಆರೈಕೆ ಬಗ್ಗೆ ಪತಿಗೆ ಸಲಹೆಯನ್ನು ಇಲ್ಲಿಯ ತಜ್ಞರು ನೀಡುತ್ತಾರೆ.ಗರ್ಭಿಣಿಯರಿಗೆ ಕೌನ್ಸೆಲಿಂಗ್‌ ಸರ್ವೀಸ್‌, ಹೈಡ್ರೋಥೆರಪಿ, ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮಗಳ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಹೆರಿಗೆ ನಂತರ ದೇಹದಲ್ಲಾಗುವ ಬದಲಾವಣೆ, ಸ್ತನ್ಯಪಾನದ ಬಗ್ಗೆಯೂ ತಜ್ಞರು ಮೊದಲೇ ತಿಳಿಸುತ್ತಾರೆ. ಹೆರಿಗೆಯಾದ ನಂತರ ಅವಶ್ಯವಿದ್ದಲ್ಲಿ ಇಲ್ಲಿಯ ತಜ್ಞರು ಮನೆಗೆ ಬಂದು ಬಾಣಂತಿಗೆ ಮಗುವಿನ ಕಾಳಜಿ, ವ್ಯಾಯಾಮ ಬಗ್ಗೆ ತಿಳಿಸಿಕೊಡುತ್ತಾರೆ.

‘ಬರ್ತ್‌ ಹೋಂ’ ತಜ್ಞರು ಫಿಸಿಯೋಥೆರಪಿಯನ್ನು ಮಾಡುತ್ತಾರೆ. ಹೆರಿಗೆಯಾದ ನಂತರ ಕೆಲ ಮಹಿಳೆಯರಲ್ಲಿ ಬೆನ್ನು ನೋವು, ಕಾಲು ನೋವು ಕಾಣಿಸಿಕೊಳ್ಳುತ್ತದೆ. ಅಂಥಹವರಿಗೆ ಫಿಸಿಯೋ ಚಿಕಿತ್ಸೆ ನೀಡುತ್ತೇವೆ’ ಎನ್ನುತ್ತಾರೆ ಸಂಸ್ಥೆಯ ಮೇಘನಾ. ಗರ್ಭಿಣಿಯ ತಪಾಸಣೆ, ಡೆಲಿವರಿ ಮತ್ತು ನಂತರದ ಚಿಕಿತ್ಸೆ ಎಲ್ಲ ಸೇರಿ ಒಂದು ಪ್ಯಾಕೇಜ್‌ ರೂಪದಲ್ಲಿ ಶುಲ್ಕವಿದೆ.

ಹೆಚ್ಚಿನ ಮಾಹಿತಿಗೆ +91 8971732677 ಕರೆ ಮಾಡಬಹುದು. https://www.thebirthhome.com/ ಈ ಜಾಲತಾಣಕ್ಕೂ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.