
ವಿಧಾನಸೌಧ
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಅಸಮತೋಲನ ನಿವಾರಣೆ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ವಿಶೇಷ ಅಭಿವೃದ್ಧಿ ಯೋಜನೆ’ (ಎಸ್‌ಡಿಪಿ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ರಾಜ್ಯ ಸರ್ಕಾರ ₹31,198 ಕೋಟಿ ಸುರಿದಿದೆ.
ಇಷ್ಟು ಹಣ ಸುರಿದರೂ ಈ ಭಾಗದಲ್ಲಿನ ಜ್ವಲಂತ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ಎನ್ನುವುದು ಈ ಭಾಗದ ಜನಪ್ರತಿನಿಧಿಗಳ ಒಕ್ಕೊರಲ ಕೊರಗು. ಪ್ರತಿ ಬಾರಿಯಂತೆ ಈ ಬಾರಿಯೂ ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಬೇಡಿಕೆಗಳ ಪಟ್ಟಿ ಮುಂದಿಡಲು ನಿರ್ಧರಿಸಿದ್ದಾರೆ.
ನೀರಾವರಿ ಯೋಜನೆಗಳು, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ, ಕನ್ನಡ ಶಾಲೆಗಳ ಶಿಥಿಲಾವಸ್ಥೆ, ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳು, ಮೂಲಸೌಕರ್ಯ, ಪ್ರವಾಸೋದ್ಯಮ ಹೀಗೆ ವಿವಿಧ ವಿಚಾರಗಳಲ್ಲಿ ಈ ಭಾಗ ಹಿಂದುಳಿದಿರುವುದನ್ನು ಪ್ರಸ್ತಾಪಿಸಿ, ಅನುದಾನ– ಅಭಿವೃದ್ಧಿಗೆ ಒತ್ತು ನೀಡುವಂತೆ ಪಕ್ಷಾತೀತವಾಗಿ ಪಟ್ಟು ಹಿಡಿಯಲು ಮುಂದಾಗಿದ್ದಾರೆ.
‘ಉತ್ತರ ಕರ್ನಾಟಕ ಭಾಗಕ್ಕೆ ಡಿ.ಎಂ. ನಂಜುಂಡಪ್ಪ ವರದಿಯ ಅನ್ವಯ 2008–09ರಿಂದ 2024–25ರ ಅವಧಿಯಲ್ಲಿ ‘ವಿಶೇಷ ಅಭಿವೃದ್ಧಿ ಯೋಜನೆ’ಯಡಿ (ಎಸ್‌ಡಿಪಿ) ₹17,710.28 ಕೋಟಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ 2013–14ರಿಂದ ಈವರೆಗೆ ₹ 13,488.45 ಕೋಟಿ ಸೇರಿ ಒಟ್ಟು ₹ 31,198 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.
ಉತ್ತರ ಮತ್ತು ದಕ್ಷಿಣ ಕರ್ನಾಟಕ ನಡುವಿನ ಅಸಮಾನತೆಯನ್ನು ಅಧ್ಯಯನ ಮಾಡಿ, ಆ ಅಸಮಾನತೆಯನ್ನು ತಗ್ಗಿಸಲು ಸೂಕ್ತ ಅಭಿವೃದ್ಧಿ ವಿಧಾನಗಳನ್ನು ಶಿಫಾರಸು ಮಾಡಲು 2000ದ ಅಕ್ಟೋಬರ್‌ನಲ್ಲಿ ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನಾಧಿಕಾರ ಸಮಿತಿಯನ್ನು ಅಂದಿನ ಸರ್ಕಾರ ರಚಿಸಿತ್ತು. ಈ ಸಮಿತಿಯು ಆಗ ಇದ್ದ 176 ತಾಲ್ಲೂಕುಗಳಲ್ಲಿನ ಕೃಷಿ, ಉದ್ದಿಮೆ, ಆರ್ಥಿಕ, ಸಾಮಾಜಿಕ, ಜನಸಂಖ್ಯೆ ಹೀಗೆ ಐದು ವಲಯಗಳಲ್ಲಿ 35 ಸೂಚಕಗಳನ್ನು ಬಳಸಿ ಅಧ್ಯಯನ ನಡೆಸಿ 2002ರ ಜೂನ್‌ನಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಸಮಿತಿಯು 176 ತಾಲ್ಲೂಕುಗಳ ಪೈಕಿ 114 ತಾಲ್ಲೂಕುಗಳು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಗುರುತಿಸಿತ್ತು. ಅವುಗಳಲ್ಲಿ ಅತ್ಯಂತ ಹಿಂದುಳಿದ 39, ಅತೀ ಹಿಂದುಳಿದ 40, ಹಿಂದುಳಿದ 35 ತಾಲ್ಲೂಕುಗಳಾಗಿದ್ದವು. ಈಗ ತಾಲ್ಲೂಕುಗಳ ಒಟ್ಟು ಸಂಖ್ಯೆ 240 ಆಗಿದೆ. ಈ ಪೈಕಿ, ನಾಲ್ಕು ತಾಲ್ಲೂಕುಗಳು ಇನ್ನೂ ರಚನೆ ಆಗಿಲ್ಲ.
ನಂಜುಂಡಪ್ಪ ವರದಿಯ ಶಿಫಾರಸಿನ ಅನ್ವಯ ರಾಜ್ಯದಲ್ಲಿರುವ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2007–08ರಿಂದ 2024–25ನೇ ಸಾಲಿನವರೆಗೆ 18 ವರ್ಷಗಳಲ್ಲಿ ಒಟ್ಟಾರೆ 48,866.49 ಕೋಟಿ ನಿಗದಿಪಡಿಸಿ, ₹40,159.42 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ₹36,866.56 ಕೋಟಿ ವೆಚ್ಚ ಮಾಡಲಾಗಿದೆ. ಈ ಮೊತ್ತದಲ್ಲಿ ಶೇ 60ರಷ್ಟು ಅನುದಾನವನ್ನು ಉತ್ತರ ಕರ್ನಾಟಕ ಭಾಗದ ತಾಲ್ಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗಿದೆ.
ದೊಡ್ಡ ಮೊತ್ತದ ಅನುದಾನ ವೆಚ್ಚ ಮಾಡಿದರೂ ರಾಜ್ಯದಲ್ಲಿ ಉತ್ತರ– ದಕ್ಷಿಣ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸಾಧ್ಯವಾಗಿಲ್ಲ. ಅಲ್ಲದೆ, ನಂಜುಂಡಪ್ಪ ವರದಿ 25 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2023ರ ಡಿ. 15ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ, ಆಗ ಇದ್ದ 240 ತಾಲ್ಲೂಕುಗಳ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಉನ್ನತಮಟ್ಟ ಸಮಿತಿ ರಚಿಸಲಾಗುವುದು ಎಂದು ಘೋಷಿಸಿದ್ದರು.
‘ಕಳೆದ 24 ವರ್ಷಗಳಲ್ಲಿ ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ಪ್ರದೇಶಗಳಲ್ಲಿನ ಅಸಮತೋಲನ ನಿವಾರಿಸಲು ಬಹಳಷ್ಟು ಯೋಜನೆಗಳನ್ನು ರೂಪಿಸಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಇದರಿಂದ ಆಗಿರುವ ಬದಲಾವಣೆ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು’ ಎಂದು 2024–25ನೇ ಸಾಲಿನ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ 2024ರ ಮಾರ್ಚ್ 16ರಂದು ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಚಿವರು, ಶಾಸಕರು, ಕೆಕೆಆರ್‌ಡಿಬಿ ಅಧ್ಯಕ್ಷರು, ಸಂಘಸಂಸ್ಥೆಗಳು, ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸಿ ಸಂವಾದ ನಡೆಸಿ, ಮಾಹಿತಿಗಳನ್ನು, ಅಭಿಪ್ರಾಯಗಳನ್ನು ಕ್ರೋಡೀಕರಿಸಿದೆ. ಸಮಿತಿಯು ವರದಿಯ ಕರಡು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಲು ತಯಾರಿ ನಡೆಸಿದೆ.
ಪ್ರಾದೇಶಿಕ ಅಸಮತೋಲನಕ್ಕೆ ಸಂಬಂಧಿಸಿದಂತೆ ಎಲ್ಲ ವಿಭಾಗ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು ಈ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದುಪ್ರೊ. ಎಂ. ಗೋವಿಂದ ರಾವ್ (ಆರ್ಥಿಕ ತಜ್ಞರು), ಅಧ್ಯಕ್ಷರು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ
ಕೆಕೆಆರ್‌ಡಿಬಿ: ವೆಚ್ಚದಲ್ಲಿ ಹಿಂದೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರತಿ ವರ್ಷ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆ ಅಂದಾಜು ಪಟ್ಟಿ ತಯಾರಿ ಮತ್ತು ಟೆಂಡರ್ ಪ್ರಕ್ರಿಯೆ ವಿಳಂಬವೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆಯಂತೆ ವೆಚ್ಚ ಆಗಿಲ್ಲ. ರಾಜ್ಯ ಸರ್ಕಾರ 2013–14ನೇ ಸಾಲಿನಿಂದ ಈವರೆಗೆ ಕೆಕೆಆರ್‌ಡಿಬಿಗೆ ₹26 ಸಾವಿರ ಕೋಟಿ ಅನುದಾನ ನಿಗದಿಪಡಿಸಿದೆ. 2024–25 ಮತ್ತು 2025–26ನೇ ಸಾಲಿನಲ್ಲಿ ಮಂಡಳಿಗೆ ತಲಾ ₹5 ಸಾವಿರ ಕೋಟಿ ನಿಗದಿಪಡಿಸಿದ್ದು ಆ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಿ ₹3 ಸಾವಿರ ಕೋಟಿಗೆ ಸೀಮಿತಗೊಳಿಸಿ ವೆಚ್ಚ ಭರಿಸಲು ಮತ್ತು ಉಳಿದ ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿಯಾಗಿ ಮುಂದಿನ ವರ್ಷದಲ್ಲಿ ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆ ಸೂಚಿಸಿದೆ. ಈ ಮಧ್ಯೆ ಕೆಕೆಆರ್‌ಡಿಬಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ತೀರಾ ಕಳಪೆಯಾಗಿದ್ದು ಸರ್ಕಾರದ ಹಣ ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇತ್ತೀಚೆಗೆ ವಿವಿಧ ಸಂಘಟನೆಗಳು ಕಲಬುರಗಿಯಲ್ಲಿರುವ ಕೆಕೆಆರ್‌ಡಿಬಿ ಕಚೇರಿ ಎದುರು ಧರಣಿಯನ್ನೂ ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.