
ಎಚ್.ಕೆ.ಪಾಟೀಲ
ಬೆಂಗಳೂರು: ‘ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಅಸಮಂಜಸ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿಲ್ಲ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
‘ಕಾಗೆ ಅವರಿಗೆ ಅಸಮಾಧಾನ ಇರಬಹುದು. ಆದರೆ ನಮ್ಮ ಸರ್ಕಾರ ಪ್ರಾದೇಶಿಕ ಅಸಮತೋಲನ ನಿವಾರಿಸಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ವಾರಗಳ ಹಿಂದಷ್ಟೇ ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಯೋಜನೆಗೆ ₹50 ಸಾವಿರ ಕೋಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದು ಮುಖ್ಯಮಂತ್ರಿಯವರಿಗೆ ನಮ್ಮ ಭಾಗದ ಕುರಿತು ಇರುವ ಕಾಳಜಿಯನ್ನು ತೋರಿಸುತ್ತದೆ’ ಎಂದರು.
‘ಅಖಂಡ ಕರ್ನಾಟಕಕ್ಕಾಗಿ ಉತ್ತರ ಕರ್ನಾಟಕದ ಭಾಗವೂ ಸೇರಿ ಎಲ್ಲ ಭಾಗದ ಜನರು ಹೋರಾಟ ಮಾಡಿದ್ದರ ಪರಿಣಾಮ ಕರ್ನಾಟಕ ರಾಜ್ಯ ಜನ್ಮ ತಳೆಯಿತು. ಅವರ ತ್ಯಾಗವನ್ನು ವ್ಯರ್ಥ ಮಾಡಬಾರದು’ ಎಂದು ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.