ಬೆಂಗಳೂರು: ‘ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಆಂತರಿಕ ವ್ಯತ್ಯಾಸ ಒಳಗೊಳಗೇ ಕುದಿಯುತ್ತಿದೆ. ಎಲ್ಲ ಸರಿ ಇದೆ ಎಂದು ಕಂಡರೂ, ಬೂದಿ ಮುಚ್ಚಿದ ಕೆಂಡದ ಸ್ಥಿತಿ ಇದೆ’ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಸುದ್ದಿಗಾರ ಜತೆ ಮಾತನಾಡಿದ ಅವರು, ‘ಯಾರನ್ನಾದರೂ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿ. ಆದರೆ ಸಂಘಟನಾ ವೇಗಕ್ಕೆ ತಡೆ ಮಾಡಬಾರದು. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ ಆಗುತ್ತದೆ’ ಎಂದರು.
‘ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡದಂತೆ ವರಿಷ್ಠರು ಕಡಿವಾಣ ಹಾಕಬೇಕಾಗಿದೆ’ ಎಂದು ಹೇಳಿದರು.
‘ನಮ್ಮಲ್ಲಿ ಪ್ರಮುಖ ನಾಯಕರ ಸಮಿತಿ ಇದೆ. ಅದು ಸಂಪ್ರದಾಯದಂತೆ ಸಭೆ ಸೇರುತ್ತದೆ. ಆದರೆ, ಅಲ್ಲಿ ವಿಷಯಾಧಾರಿತ ಚರ್ಚೆ ನಡೆಯುತ್ತಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ನಾಯಕರ ಸಮಿತಿ ಸದಸ್ಯರು, ಪಕ್ಷ ಕಟ್ಟಿ ಬೆಳೆಸಿದ ಪ್ರಮುಖರ ಜತೆ ಚರ್ಚಿಸಿ ತೀರ್ಮಾನ ತೆಗೆದು
ಕೊಳ್ಳುವ ಕೆಲಸ ಆಗುತ್ತಿಲ್ಲ’ ಎಂದರು.
‘ಪಕ್ಷದಲ್ಲಿ ಶುದ್ಧೀಕರಣ ಆರಂಭವಾಗಿದೆ. ಈ ಕೆಲಸ ಕೇವಲ ಪ್ರೋಕ್ಷಣೆಯಿಂದ ಆಗುವುದಿಲ್ಲ. ಅದೂ ಕೂಡ ಒಳ್ಳೆಯ ರೀತಿಯಲ್ಲಿ ಆಗಬೇಕು. ಕೆಲವರನ್ನು ಹೊರಗೆ ಹಾಕುವ ಮೂಲಕ ಶುದ್ಧೀಕರಣ ಆರಂಭವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.