ADVERTISEMENT

ವಿದ್ಯುತ್‌ ಖರೀದಿ ಒಪ್ಪಂದ ಮರುಪರಿಶೀಲನೆಗೆ ಸೂಚನೆ

ಕಾನೂನು ಸಲಹೆ ಪಡೆಯಲು ಸಚಿವ ಸುನಿಲ್‌ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 22:03 IST
Last Updated 18 ಆಗಸ್ಟ್ 2022, 22:03 IST
ವಿ. ಸುನಿಲ್ ಕುಮಾರ್
ವಿ. ಸುನಿಲ್ ಕುಮಾರ್   

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ನಡೆದ ವಿದ್ಯುತ್‌ ಖರೀದಿ ಒಪ್ಪಂದದಲ್ಲಿ (ಪಿಪಿಎ) ದರ ನಿಗದಿ ವಿಧಾನ ಅವೈಜ್ಞಾನಿಕವಾಗಿದ್ದು, ಈ ಒಪ್ಪಂದಗಳನ್ನು ಮುಂದುವರಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಇಂಧನ ಇಲಾಖೆ ತೀರ್ಮಾನಿಸಿದೆ.

2010ರಿಂದ ಇಲ್ಲಿಯವರೆಗೆ ನಡೆದ ದೀರ್ಘಾವಧಿ ಖರೀದಿ ಒಪ್ಪಂದ ಈಗ ಇರುವ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟಾಗಿರುವುದು ಇಂಧನ ಸಚಿವ ವಿ.ಸುನಿಲ್‌ ಕುಮಾರ್ ಅವರ ಗಮನಕ್ಕೆ ಬಂದ ಕಾರಣ ಪಿಪಿಎಗಳ ಹಿಂದಿರುವ ಲೆಕ್ಕಾಚಾರ ಪತ್ತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

‘ಈ ಅವೈಜ್ಞಾನಿಕ ಒಪ್ಪಂದದಿಂದಾಗಿ ಎಸ್ಕಾಂಗಳಿಗೆ ಭಾರಿ ಪ್ರಮಾಣದಲ್ಲಿ ಹೊರೆಯಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷವೂ ಆಗುತ್ತಿರುವ ನಷ್ಟ ತಪ್ಪಿಸಲು ಒಪ್ಪಂದ ಪುನರ್‌ ಪರಿಶೀಲನೆ ನಡೆಸುವುದು ಅನಿವಾರ್ಯ’ ಎಂದು ಸುನಿಲ್ ಕುಮಾರ್ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪ್ರತಿಪಾದಿಸಿದರು.

ADVERTISEMENT

ಪ್ರತಿ ಯೂನಿಟ್‌ಗೆ ₹5 ಕ್ಕೂ ಮೇಲ್ಪಟ್ಟಿರುವ ಖರೀದಿ ಒಪ್ಪಂದದ ಬಗ್ಗೆ ಪುನರ್‌ ಪರಿಶೀಲನೆ ನಡೆಸುವಂತೆ ಅವರು ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಸದ್ಯದಲ್ಲೇ ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿಯೂ ಹೇಳಿದರು.

ಬಹುತೇಕ ಒಪ್ಪಂದಗಳು 26 ವರ್ಷಗಳಷ್ಟು ದೀರ್ಘಾವಧಿಯಾಗಿದ್ದು ಪ್ರತಿ ಯೂನಿಟ್‌ಗೆ ₹8.5 ರಿಂದ ₹11 ರವರೆಗೂ ದರ ನಿಗದಿ ಮಾಡಲಾಗಿದೆ. ಇದರಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಭಾರಿ ಪ್ರಮಾಣದ ಹೊರೆಯಾಗಿ ಪರಿಣಮಿಸಿದೆ ಎಂದು ಸುನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.