ADVERTISEMENT

ಅಭ್ಯರ್ಥಿಗಳಿಗೆ ನೋಟಿಸ್: ಶಿಕ್ಷಕರ ನೇಮಕ ಪರೀಕ್ಷೆಯಲ್ಲೂ ಅಕ್ರಮ?

52 ಜನರ ಫಲಿತಾಂಶಕ್ಕೆ ತಡೆ

ರಶ್ಮಿ ಬೇಲೂರು
Published 20 ಆಗಸ್ಟ್ 2022, 20:01 IST
Last Updated 20 ಆಗಸ್ಟ್ 2022, 20:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗಾಗಿ ಮೇ ತಿಂಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ 52 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಅವರ ವಿರುದ್ಧ ತನಿಖೆ ಆರಂಭಿಸಿದೆ.

ಕೈಬರಹದಲ್ಲಿ ವ್ಯತ್ಯಾಸ, ಬಳಸಲಾದ ಶಾಯಿಯಲ್ಲಿನ ವ್ಯತ್ಯಾಸ, ಒಎಂಆರ್‌ ಶೀಟ್‌ನಲ್ಲಿ ವೈಟ್‌ನರ್‌ ಬಳಸಿ ಉತ್ತರಗಳನ್ನು ತಿದ್ದಿರುವುದು ಮೌಲ್ಯಮಾಪನದ ವೇಳೆ ಕಂಡುಬಂದಿದೆ. ಅಂತಹ ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದು, ಉತ್ತರ ನೀಡುವಂತೆ ಸೂಚಿಸಲಾಗಿದೆ. ತಮ್ಮನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವಂತೆ ಕೆಲವು ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲೇ ಕೋರಿರುವುದೂ ಕಂಡುಬಂದಿದೆ.

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಮೇ ತಿಂಗಳಲ್ಲಿ ಸಿಇಟಿ ನಡೆಸಲಾಗಿತ್ತು. 1.16 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇತ್ತೀಚೆಗಷ್ಟೆ ಫಲಿತಾಂಶ ಪ್ರಕಟವಾಗಿದ್ದು, 52,432 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ADVERTISEMENT

‘ಒಎಂಆರ್‌ ಶೀಟ್‌ಗಳನ್ನು ಮೌಲ್ಯಮಾಪನಕ್ಕೆ ಕಳಿಸುವ ಮುನ್ನ ಸ್ಕ್ಯಾನ್‌ ಮಾಡಲಾಗಿದೆ. ಕೈ ಬರಹದಲ್ಲಿ ವ್ಯತ್ಯಾಸ ಇರುವುದು, ಶಾಯಿಯಲ್ಲಿ ಬದಲಾವಣೆ ಮತ್ತು ವೈಟ್‌ನರ್‌ ಬಳಸಿ ಉತ್ತರ ಪತ್ರಿಕೆ ತಿದ್ದಿರುವುದು ಸ್ಕ್ಯಾನಿಂಗ್‌ ವೇಳೆ ಪತ್ತೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೆಲವು ಅಭ್ಯರ್ಥಿಗಳು ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಅವರು ನೀಡಿರುವ ಉತ್ತರದಲ್ಲಿ ಸತ್ಯಾಂಶವಿದೆ ಎಂದು ಮನವರಿಕೆಯಾದಲ್ಲಿ ಅಂತಹವರನ್ನು ವಿಚಾರಣೆಗೆ ಕರೆಸಲಾಗುವುದು. ಕೈಬರಹದಲ್ಲಿನ ವ್ಯತ್ಯಾಸ ಮತ್ತಿತರ ಅಂಶಗಳ ಕುರಿತು ಪರಿಶೀಲಿಸಲು ಅಂತಹ ಅಭ್ಯರ್ಥಿಗಳನ್ನು ಕರೆಸಿ, ಪರೀಕ್ಷೆ ಬರೆಸಲಾಗುವುದು ಎಂದು ಹೇಳಿದರು.

52 ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ಎಲ್ಲ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಯ ರೆಕಾರ್ಡಿಂಗ್‌ ಅನ್ನು ಇಲಾಖೆ ವಶಕ್ಕೆ ಪಡೆದಿದೆ. ಅವುಗಳ ಪರಿಶೀಲನೆ ನಡೆಯುತ್ತಿದೆ. ಯಾವುದೇ ಅಭ್ಯರ್ಥಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಅಂತಹವರನ್ನು ಶಾಶ್ವತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಅನರ್ಹಗೊಳಿಸಲು ಇಲಾಖೆ ಮುಂದಾಗಿದೆ.

‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಬಹಿರಂಗವಾದ ಬಳಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಅನ್ಯ ಇಲಾಖೆಗಳ ಅಧಿಕಾರಿಗಳನ್ನೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು’ ಎಂದು ಇಲಾಖೆಯ ಮೂಲಗಳು ಹೇಳಿವೆ.

15,000 ಶಿಕ್ಷಕರ ಹುದ್ದೆಗಳ ಪೈಕಿ ಸುಮಾರು 3,000 ಹುದ್ದೆಗಳು ಭರ್ತಿಯಾಗದೇ ಉಳಿಯಬಹುದು ಎಂದು ಅಂದಾಜಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ 2023ರ ಫೆಬ್ರುವರಿಯಲ್ಲಿ ಮತ್ತೆ ಸಿಇಟಿ ನಡೆಸಲು ಇಲಾಖೆ ಸಿದ್ಧತೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.