ADVERTISEMENT

ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ

ಭೀಮಣ್ಣ ಬಾಲಯ್ಯ
Published 30 ನವೆಂಬರ್ 2025, 23:30 IST
Last Updated 30 ನವೆಂಬರ್ 2025, 23:30 IST
ಕಲಬುರಗಿ ಜಿಲ್ಲೆಯ ಗ್ರಾಮವೊಂದರ ಕೂಸಿನ ಮನೆಯಲ್ಲಿ ಆರೈಕೆದಾರರೊಬ್ಬರು ಮಕ್ಕಳ ಆರೈಕೆಯಲ್ಲಿ ತೊಡಗಿರುವುದು
ಕಲಬುರಗಿ ಜಿಲ್ಲೆಯ ಗ್ರಾಮವೊಂದರ ಕೂಸಿನ ಮನೆಯಲ್ಲಿ ಆರೈಕೆದಾರರೊಬ್ಬರು ಮಕ್ಕಳ ಆರೈಕೆಯಲ್ಲಿ ತೊಡಗಿರುವುದು   

ಕಲಬುರಗಿ: ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಆರಂಭಿ ಸಿದ್ದ ‘ಕೂಸಿನ ಮನೆ’ ಆರೈಕೆದಾರರಿಗೆ ನರೇಗಾದಡಿ ಗೌರವಧನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಇದರಿಂದಾಗಿ ರಾಜ್ಯದಲ್ಲಿ ಕೂಸಿನ ಮನೆಯಲ್ಲಿ ಆರೈಕೆದಾರರಾಗಿ ನೇಮಕಗೊಂಡಿದ್ದ 7,358 ಕೂಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ನರೇಗಾ ಯೋಜನೆಯ ಕಾರ್ಮಿಕರ ಎಳೆಯ ಮಕ್ಕಳ ಪಾಲನೆ, ಆರೈಕೆಗಾಗಿ ರಾಜ್ಯ ಸರ್ಕಾರ 2023ರಲ್ಲಿ ಈ ಕಾರ್ಯಕ್ರಮ ರೂಪಿಸಿದೆ.

ಒಂದು ‘ಕೂಸಿನ ಮನೆ’ಗೆ ಸಕ್ರಿಯ ಉದ್ಯೋಗ ಚೀಟಿ ಹೊಂದಿದ್ದ ಇಬ್ಬರು ಮಹಿಳೆಯರನ್ನು ಆರೈಕೆದಾರರಾಗಿ ನೇಮಿಸಲಾಗಿದೆ. ಇವರಿಗೆ ಸಾಮೂಹಿಕ ಕಾಮಗಾರಿಗಳಲ್ಲಿ ಪ್ರತ್ಯೇಕ ಎನ್‌ಎಂಆರ್‌ (ನಾಮಿನಲ್‌ ಮಾಸ್ಟರ್‌ ರೋಲ್‌) ಸೃಜಿಸಿ, ಕೆಲಸದ ಸ್ಥಳದಲ್ಲಿ ದೈನಂದಿನ ಹಾಜರಾತಿಯಿಂದ ವಿನಾಯಿತಿ ನೀಡಿದ್ದು ಗೌರವಧನವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಕಾಮಗಾರಿ ಇಲ್ಲದಿದ್ದಾಗ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಗೌರವಧನ ಭರಿಸಲಾಗುತ್ತಿತ್ತು. 

ADVERTISEMENT

ನರೇಗಾದಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 4,000 ಕೂಸಿನ ಮನೆಗಳನ್ನು ಸ್ಥಾಪಿಸಿತ್ತು. ಈಗ ‘ಮನೆ’ಗಳ ಸಂಖ್ಯೆ 3,679ಕ್ಕೆ ಇಳಿದಿದೆ. 46,723 ಮಕ್ಕಳ ನೋಂದಣಿ ಆಗಿದೆ. 

ಕೆಲ ದಿನಗಳ ಹಿಂದೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ರಾಜ್ಯದ ಗ್ರಾಮೀಣಾಭಿವೃದ್ಧಿ ಆಯುಕ್ತಾ ಲಯಕ್ಕೆ ಪತ್ರ ಬರೆದಿದ್ದು, ‘ಆರೈಕೆದಾರರ ಗೌರವಧನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಭರಿಸಲು ನರೇಗಾ ಕಾಯ್ದೆಯ ಶೆಡ್ಯೂಲ್–2ರಲ್ಲಿ ಅವಕಾಶ ಇಲ್ಲ’ ಎಂದು ತಿಳಿಸಿದೆ.

ಆದ್ದರಿಂದ ಆರೈಕೆದಾರರಿಗೆ ತಕ್ಷಣದಿಂದ ವಿನಾಯಿತಿ ರದ್ದು ಪಡಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. 

‘ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಕೂಲಿಯನ್ನು ಕೇಂದ್ರದ ಅನುದಾನದಲ್ಲಿ ನೀಡಲಾಗುತ್ತದೆ; ಸಲಕರಣೆಗಳ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ
ಭಂವರ್ ಸಿಂಗ್ ಮೀನಾ ಜಿ.ಪಂ ಸಿಇಒ ಕಲಬುರಗಿ
ಪ್ರಿಯಾಂಕ್ ಖರ್ಗೆ
‘ಕೇಂದ್ರ ಸಚಿವರೊಂದಿಗೆ ಚರ್ಚೆ’
‘ಮಹಿಳಾ ಕಾರ್ಮಿಕರು ಮಕ್ಕಳನ್ನು ‘ಕೂಸಿನ ಮನೆ’ಗಳಲ್ಲಿ ಬಿಟ್ಟು ನಿಶ್ಚಿಂತೆಯಿಂದ ನರೇಗಾದಲ್ಲಿ ದುಡಿದು ಕೂಲಿ ಪಡೆಯುತ್ತಿದ್ದಾರೆ. ಕೂಸಿನ ಮನೆಯ ಆರೈಕೆದಾರರೂ ನರೇಗಾ ಭಾಗವೇ ಆಗಿದ್ದಾರೆ. ಆದ್ದರಿಂದ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಈ ಆದೇಶ ಸರಿಯಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ವಿನಾಯಿತಿ ನೀಡುವಂತೆ ಮನವಿ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.