
ಬೆಂಗಳೂರು: ‘ನರೇಗಾ ಯೋಜನೆ ಹಾಗೂ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬಹಿರಂಗ ಚರ್ಚೆಗೆ ಬರಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಂಥಾಹ್ವಾನ ನೀಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ₹11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಜೋಶಿ ಅವರ ಹೇಳಿಕೆ ಆಧಾರ ರಹಿತ. ಈ ಕುರಿತು ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆಗೆ ಬಂದು ಚರ್ಚೆ ಮಾಡಲಿ’ ಎಂದು ಸವಾಲು ಹಾಕಿದರು.
‘ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ಒಪ್ಪಿಸಬೇಕು. ತಾಕತ್ತಿದ್ದರೆ ತನಿಖೆ ಮಾಡಿಸಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಇಂತಹ ಆರೋಪ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ನರೇಗಾ ವಿಚಾರ ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ. ಬಿಜೆಪಿ ನಾಯಕರು ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಕುರಿತು ಅವರು ಸಮರ್ಥನೆ ಮಾಡಿಕೊಳ್ಳಲಿ, ಯೋಜನೆಯ ಲೋಪಗಳು, ದುಷ್ಪರಿಣಾಮಗಳನ್ನು ಜನರಿಗೆ ಕಾಂಗ್ರೆಸ್ ಮನವರಿಕೆ ಮಾಡಿಕೊಡಲಿದೆ’ ಎಂದು ಹೇಳಿದರು.
‘ಜಿ ರಾಮ್ ಜಿಯಿಂದ ಕಾಂಗ್ರೆಸ್ ಕಳ್ಳತನ ಬಂದ್’
ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್ ಜಿ’ ಯೋಜನೆ ಜಾರಿ ಆಗುವುದರಿಂದ ತಮ್ಮ ಕಳ್ಳತನ ಸಂಪೂರ್ಣ ಬಂದ್ ಆಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಯೋಜನೆ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸಿಲ್ಲ. ಆದರೆ ಈ ಕುರಿತು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ ಎಂದರು. ‘ವಿಬಿ ಜಿ ರಾಮ್ ಜಿ’ ಮಸೂದೆಯ ಸೆಕ್ಷನ್ 16ರ ಅಡಿ ಗ್ರಾಮ ಪಂಚಾಯಿತಿಗಳಿಗೆ ಗ್ರಾಮದ ಎಲ್ಲಾ ಮನೆಗಳಲ್ಲಿರುವ ವ್ಯಕ್ತಿಗಳಿಗೆ ಕೆಲಸ ಇದೆಯೊ ಇಲ್ಲವೋ ಎಂದು ಪರಿಶೀಲಿಸುವ ಹಕ್ಕು ಇದೆ. ಗ್ರಾಮ ಅಭಿವೃದ್ಧಿ ಯೋಜನೆ ರೂಪಿಸುವ ಹಕ್ಕು ಯೋಜನೆ ಅನುಷ್ಠಾನ ಮಾಡುವ ಎಲ್ಲವನ್ನು ದಾಖಲೆ ಮಾಡುವ ಮತ್ತು ಕೂಲಿ ಕೊಡುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇದೆ. ಇಷ್ಟೆಲ್ಲಾ ಅಧಿಕಾರ ನೀಡಿದ್ದರೂ ಕಾಂಗ್ರೆಸ್‌ನವರು ಏಕೆ ವಿರೋಧ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು. ದೇಶದ ಶೇ 80 ರಷ್ಟು ಯೋಜನೆಗಳು ಜವಾಹರಲಾಲ್ ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಹೆಸರಿನಲ್ಲಿವೆ. ನರೇಗಾಗೆ ಮೊದಲು ಜವಾಹರ್ ರೋಜಗಾರ್ ಯೋಜನೆ ಅಂತ ಇತ್ತು. ಚುನಾವಣೆ ಬಂದಾಗ ಗಾಂಧಿ ಹೆಸರನ್ನು ದುರುಪಯೋಗಪಡಿಸಿಕೊಂಡರು. ಗಾಂಧೀಜಿಯವರನ್ನು ರಾಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಈ ಯೋಜನೆಗೆ ರಾಮನ ಹೆಸರು ಇಟ್ಟಿರುವುದರಿಂದ ಗಾಂಧಿ ಆತ್ಮ ಖುಷಿಯಾಗಿರುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.