
ಬೆಂಗಳೂರು: ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿತು.
‘ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ರೈತರು ನಡೆಸಿದ ಪ್ರತಿಭಟನೆ ರೀತಿಯಲ್ಲಿಯೇ, ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು, ನರೇಗಾ ಮರು ಸ್ಥಾಪಿಸುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದು ಸಭೆಯಲ್ಲಿ ಮಾತನಾಡಿದ ನಾಯಕರು ಘೋಷಿಸಿದರು.
ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು ಹಾಗೂ ಮುಖಂಡರ ಸಮ್ಮುಖದಲ್ಲಿ ‘ನರೇಗಾ ಬಚಾವೋ, ರಾಜಭವನ ಚಲೊ’ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಡೆ ವಿರುದ್ದ ಆಕ್ರೋಶ ಹೊರಹಾಕಿದರು.
‘ಗಾಂಧೀಜಿ ಹೆಸರನ್ನು ತೆಗೆದು ಹಾಕಿ ಎರಡನೇ ಬಾರಿಗೆ ಅವರನ್ನು ಬಿಜೆಪಿ ಹತ್ಯೆ ಮಾಡಿದೆ. ಆರ್‌ಎಸ್‌ಎಸ್‌ನ ಸೂಚನೆಯಂತೆಯೇ ಬಿಜೆಪಿ ಸರ್ಕಾರ ಯೋಜನೆಯ ಸ್ವರೂಪವನ್ನೇ ಬದಲಾಯಿಸಿದೆ. ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೇ ಕಿತ್ತುಕೊಂಡು ಕೇಂದ್ರ ಸರ್ಕಾರವೇ ಯೋಜನೆ ರೂಪಿಸಲಿದ್ದು, ಇದರಿಂದ ಉದ್ಯೋಗ ಖಾತ್ರಿಯ ಆಶಯವೇ ಹಾಳಾದಂತಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ನಾಯಕರು ಹೇಳಿದರು.
ಬಳಿಕ ಮುಖ್ಯಮಂತ್ರಿ ಸೇರಿ 26 ಮಂದಿಯ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
‘ಉದ್ಯೋಗ ಖಾತ್ರಿ ರದ್ದತಿಗೆ ಹುನ್ನಾರ’
‘ನಿಧಾನವಾಗಿ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ಶ್ರಮ ಸಂಸ್ಕೃತಿಗೆ ಗೌರವ ನೀಡಿತು. ಪ್ರತಿ ಪಂಚಾಯಿತಿಗೆ ವರ್ಷಕ್ಕೆ ₹1 ಕೋಟಿ ವರೆಗೂ ಅನುದಾನ ನೀಡಿ ಸಬಲೀಕರಣಗೊಳಿಸಿತು. ತಮ್ಮ ಭಾಗದಲ್ಲಿ ಆಗಬೇಕಾದ ಕಾಮಗಾರಿಗಳ ಕುರಿತು ಪಂಚಾಯಿತಿ, ಗ್ರಾಮಸಭೆಗಳಲ್ಲಿ ಯೋಜನೆ ತಯಾರಿಸುವ ಅಧಿಕಾರವೂ ಇತ್ತು. ಈಗ ಆ ಅಧಿಕಾರ ಕಿತ್ತುಕೊಂಡು ಕೇಂದ್ರದ ಅಧಿಕಾರಿಗಳಿಗೆ ನೀಡಲಾಗಿದೆ’ ಎಂದು ಹರಿಹಾಯ್ದರು.
‘ನರೇಗಾ ಯೋಜನೆಯಿಂದ ಶೇ 53ರಷ್ಟು ಮಹಿಳೆಯರು, ಶೇ 28ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, 5 ಲಕ್ಷ ಅಂಗವಿಕಲರಿಗೆ ಉದ್ಯೋಗ ಸಿಗುವಂತಾಗಿತ್ತು. ಬಡವರು ಮುಖ್ಯವಾಹಿನಿಗೆ ಬರುವುದು ಆರ್‌ಎಸ್ಎಸ್‌ನವರಿಗೆ ಬೇಕಾಗಿಲ್ಲ. ಬಡವರ ಪರವಾದ ಎಲ್ಲ ಕಾರ್ಯಕ್ರಮ ಬಿಜೆಪಿ ರದ್ದುಗೊಳಿಸುತ್ತಿದ್ದು, ಇದರ ಭಾಗವಾಗಿಯೇ ನರೇಗಾ ಯೋಜನೆ ಬದಲಾಯಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಕಾಯ್ದೆಯ ರದ್ದತಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಆದರೆ, ಬಿಜೆಪಿಯವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಅವರು ಚರ್ಚೆಯಲ್ಲಿ ಭಾಗವಹಿಸದೇ ಇದ್ದರೂ ರದ್ದತಿಯ ವಿರುದ್ಧ ಸರ್ಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ’ ಎಂದು ತಿಳಿಸಿದರು.
‘ಎಚ್‌ಡಿಕೆ, ಬಿಜೆಪಿ ಚರ್ಚೆಗೆ ಬರಲಿ’
‘ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಂಥಾಹ್ವಾನ ನೀಡಿದರು.
‘ಈ ಯೋಜನೆ ಜಾರಿಯಾಗಿ 20 ವರ್ಷ ಆಗಿದೆ. 11 ವರ್ಷದಿಂದ ಬಿಜೆಪಿ ಸರ್ಕಾರವಿದೆ. ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ಸರ್ಕಾರ ಏನು ಮಾಡುತ್ತಿದೆ? ಕರ್ನಾಟಕದಲ್ಲಿನ ಅಕ್ರಮ ಪ್ರಕರಣಗಳಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬಿಜೆಪಿ ನಾಯಕರು ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿದ್ದು, ಅಲ್ಲಿ ಕುಳಿತುಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಕಚೇರಿಯಲ್ಲಿ ಗಾಂಧೀಜಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆಯೂ ಅವರಿಗಿಲ್ಲ’ ಎಂದು ಹೇಳಿದರು.
ಡಿಕೆಶಿಗೆ ಟವೆಲ್ ಕಟ್ಟಿದ ಸಿದ್ದರಾಮಯ್ಯ
ಪ್ರತಿಭಟನೆ ನಡೆಯುತ್ತಿದ್ದ ವೇದಿಕೆಯ ಮೇಲೆಯೇ, ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ತಲೆಗೆ ಟವೆಲ್ ಕಟ್ಟಿದರು.
ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮುಖಂಡರು ಟವಲ್ ತಂದಿದ್ದರಿಂದ ಹಲವರು ಹಳ್ಳಿಯ ಜನರಂತೆ ತಲೆಗೆ ಕಟ್ಟಿಕೊಂಡರು. ಕೆಲವರು ಹೆಗಲ ಮೇಲೆ ಹಾಕಿಕೊಂಡರು. ಶಿವಕುಮಾರ್ ಕಟ್ಟಿಕೊಂಡಿದ್ದ ಟವೆಲ್ ಒಪ್ಪವಾಗಿರಲಿಲ್ಲ. ಅದು ಮುಖ್ಯಮಂತ್ರಿಯವರ ಗಮನಕ್ಕೆ ಬಂದಾಗ, ತಾವು ಕಟ್ಟಿಕೊಂಡಿದ್ದ ರೀತಿಯಲ್ಲಿಯೇ ಶಿವಕುಮಾರ್ ಅವರ ತಲೆಗೂ ಟವಲ್ ಸುತ್ತಿದರು.
‘ಜೈ ಡಿಕೆ, ಡಿಕೆ’ ಘೋಷಣೆ: ಗದರಿದ ಡಿಕೆಶಿ
ಪ್ರತಿಭಟನೆ ವೇಳೆ ನಿರಂತರವಾಗಿ ಡಿಕೆ ಅವರಿಗೆ ಜೈ, ಡಿಕೆ, ಡಿಕೆ ಎನ್ನುವ ಘೋಷಣೆಗಳು ಮೊಳಗುತ್ತಲೇ ಇದ್ದವು. ತಮ್ಮ ಭಾಷಣದ ವೇಳೆ ಕೂಗು ಜೋರಾದಾಗ, ‘ಏಯ್ ತರಲೆ ಸುಮ್ನಿರೋ’ ಎಂದರು. ಸಿದ್ದರಾಮಯ್ಯ ಅವರು ಭಾಷಣಕ್ಕೆ ನಿಂತಾಗಲೂ ‘ಡಿಕೆ, ಡಿಕೆ’ ಎಂದು ಘೋಷಣೆ ಅಬ್ಬರಿಸಿದರು. ಅವರು ಕೂಡ ಸಿಟ್ಟಾಗಿ, ಸುಮ್ಮನಿರುವಂತೆ ಗದರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.