
ಬೆಂಗಳೂರು: ‘ನರೇಗಾ ಯೋಜನೆ ಹೆರಿನಲ್ಲಿ ಕರ್ನಾಟಕದಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ. ಕಾಂಗ್ರೆಸ್ ಸರ್ಕಾರ ಇರುವೆಡೆಯಲ್ಲೆಲ್ಲಾ ಅಕ್ರಮ ಪತ್ತೆಯಾಗಿದೆ. ಹೀಗಾಗಿಯೇ ಈ ಯೋಜನೆಯನ್ನು ಬದಲಿಸಲಾಗಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ವಿಬಿ–ಜಿ ರಾಮ್ ಜಿ ಕುರಿತು ಪಕ್ಷದ ನಾಯಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ನರೇಗಾ ಯೋಜನೆ ಅಡಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು ಮತ್ತು ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ಆದರೆ ಇದನ್ನು ಮರೆಮಾಚುತ್ತಿರುವ ಕಾಂಗ್ರೆಸ್, ನರೇಗಾ ಯೋಜನೆಯ ರಕ್ಷಕನಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
‘2006–07ರಿಂದ 2013–14ರವರೆಗೆ ಯುಪಿಎ ಸರ್ಕಾರವು ನರೇಗಾ ಯೋಜನೆ ಮೂಲಕ ಕರ್ನಾಟಕದಲ್ಲಿ 58.46 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಿತ್ತು ಮತ್ತು ₹8,739.32 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ನಮ್ಮ ಸರ್ಕಾರವು 2014–15ರಿಂದ 2025–26ರಲ್ಲಿ ಈವರೆಗೆ ಒಟ್ಟು 127.52 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಿದ್ದು, ₹48,549.82 ಕೋಟಿ ಬಿಡುಗಡೆ ಮಾಡಿದೆ’ ಎಂದು ವಿವರಿಸಿದರು.
‘ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಪುರುಷರು ಸೀರೆಯುಟ್ಟು, ಮಹಿಳೆಯರಂತೆ ಬಿಂಬಿಸಿಕೊಂಡು ನರೇಗಾದ ಅಡಿ ಕೂಲಿ ಪಡೆದುಕೊಂಡಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇಂತಹ ನೂರಾರು ಅಕ್ರಮಗಳು ಸೋಷಿಯಲ್ ಆಡಿಟ್ ಮೂಲಕ ಪತ್ತೆಯಾಗಿದ್ದವು. ಅಕ್ರಮದ ಮೊತ್ತದಲ್ಲಿ ₹107.78 ಕೋಟಿ ವಸೂಲಿ ಮಾಡುವಂತೆ ಸೂಚಿಸಿದ್ದರೂ, ಒಂದು ರೂಪಾಯಿಯೂ ವಸೂಲಾಗಲಿಲ್ಲ’ ಎಂದರು.
‘ಮಹಾಲೇಖಪಾಲರ ವರದಿಯಲ್ಲಿ ₹24.12 ಕೋಟಿ ವಸೂಲಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಸೂಲಿ ಮಾಡಿದ್ದು ₹2.47 ಕೋಟಿ ಮಾತ್ರ. ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ದೂರು ಬಂದಿತ್ತು. ಕೇಂದ್ರ ಸಚಿವಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಹಲವು ಅಕ್ರಮಗಳು ಗೊತ್ತಾದವು. ಒಂದೇ ಕೆರೆಯ ಹೂಳನ್ನು ಹಲವು ಬಾರಿ ತೆಗೆಯಲಾಗಿದೆ ಎಂದು ಬಿಲ್ ಸೃಷ್ಟಿಸಲಾಗಿತ್ತು. ಕೆಲವೇ ಕುಟುಂಬಗಳಿಗೆ ಆ ಹಣ ಜಮೆಯಾಗಿತ್ತು. ಶಾಲೆಯೊಂದರ ಶೌಚಾಲಯ ನಿರ್ಮಿಸಿದ ಬಿಲ್ ಸೃಷ್ಟಿಸಿ, ಕಾಂಪೌಂಡ್ ಕಟ್ಟಲಾಗಿತ್ತು’ ಎಂದು ವಿವರಿಸಿದರು.
‘ನರೇಗಾದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮನಮೋಹನ್ ಸಿಂಗ್ ಅವರು ತಾವು ಪ್ರಧಾನಿಯಾಗಿದ್ದಾಗ 2011ರಲ್ಲೇ ಹೇಳಿದ್ದರು. ನಕಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಲಾಗುತ್ತಿದೆ ಎಂಬುದನ್ನು ಸೋನಿಯಾ ಗಾಂಧಿ ಅವರೂ ಹೇಳಿದ್ದರು. ಈ ಯೋಜನೆಯ ನಿಯಮಗಳಲ್ಲಿ ಇದ್ದ ಲೋಪಗಳನ್ನು ಪರಿಗಣಿಸಿ, ಕೂಲಂಕಷವಾಗಿ ಪರಿಶೀಲನೆ ನಡೆಸಿಯೇ ನರೇಂದ್ರ ಮೋದಿ ಅವರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ’ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.