ADVERTISEMENT

ಸೌಲಭ್ಯಗಳಲ್ಲಿ ತಾರತಮ್ಯ, ಬೇಸರ ತೋಡಿಕೊಂಡ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಕರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 2:31 IST
Last Updated 9 ಏಪ್ರಿಲ್ 2020, 2:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆರೋಗ್ಯ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ನೀಡುತ್ತಿರುವ ಸೌಲಭ್ಯವನ್ನು ನಮಗೆ ನೀಡುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಶುಶ್ರೂಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್–19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರು ಸೌಲಭ್ಯ ಒದಗಿಸುವಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಾಯಂ ಸ್ಟಾಫ್ ನರ್ಸಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಸಂತೋಷ್ ಕುಮಾರ್, ‘ವೈದ್ಯಕೀಯ ಶಿಕ್ಷಣವನ್ನು ಆರೋಗ್ಯ ಇಲಾಖೆಯಿಂದ ವಿಭಜಿಸಿದಾಗಿನಿಂದಲೂ ಸೌಲಭ್ಯಗಳಲ್ಲಿ ತಾರತಮ್ಯ ನಡೆಯುತ್ತಲೇ ಇದೆ. ನಮಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ನಿಲ್ಲಿಸಲಾಗಿದೆ. ಸಂಬಳ ಚೀಟಿಯಲ್ಲಿ ವೃತ್ತಿಪರ ತರಿಗೆಯನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿದರೆ ನಮಗೆ ಬೇರೆ ಏನೂ ಸೌಲಭ್ಯ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್‌–19 ಯೋಧರಿಗೆ ಸರ್ಕಾರ ₹ 50 ಲಕ್ಷ ವಿಮೆ ಇಟ್ಟಿರುವುದು ಸ್ವಾಗತಾರ್ಹ. ಆದರೆ, ಮೂರು ತಿಂಗಳ ಬಳಿಕ ಇದು ಕೊನೆಗೊಳ್ಳುತ್ತದೆ. ಸರ್ಕಾರವು ಸಾಮಾನ್ಯ ವಿಮಾ ಸೌಲಭ್ಯವನ್ನು ವಿಸ್ತರಿಸಬೇಕು’ ಎಂದರು.

‘ನಾವು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹೊರಗುಳಿದಿದ್ದೇವೆ. ಕೋವಿಡ್‌–19 ವಿರುದ್ಧ ಹೋರಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ, ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕಿಯೊಬ್ಬರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ವೆಂಟಿಲೇಟರ್‌ಗಳ ಕೊರತೆ ಇಲ್ಲ

ಕೊರೊನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್‌ಗಳ ಕೊರತೆ ಇದೆ ಎಂಬುದನ್ನು ಅಲ್ಲಗಳೆದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, 1000 ಸಾವಿರ ವೆಂಟಿಲೇಟರ್‌ಗಳ ಪೈಕಿ 200 ಈಗಾಗಲೇ ಬಂದಿವೆ ಎಂದು ಹೇಳಿದ್ದಾರೆ. ‘ರಾಜ್ಯದಲ್ಲಿ ಇಂದು 734 ವೆಂಟಿಲೇಟರ್‌ಗಳಿವೆ. ಹೊಸದಾಗಿ ಬಂದಿರುವ ವೆಂಟಿಲೇಟರ್‌ಗಳನ್ನು ವಿವಿಧ ಜಿಲ್ಲಾ ಆಸ್ಪತ್ರೆಗಳಿಗೆ ನೀಡಲಾಗಿದೆ. ಬೇಸಿಕ್‌ ಮಾದರಿಯ ವೆಂಟಿಲೇಟರ್‌ಗಳನ್ನು ಕಡಿಮೆ ಸೌಲಭ್ಯದ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಅತ್ಯಾಧುನಿಕ ಸೌಲಭ್ಯದ ವೆಂಟಿಲೇಟರ್‌ಗಳನ್ನು ದೊಡ್ಡ ಆಸ್ಪತ್ರೆಗಳಿಗೆ ನೀಡಲಾಗುತ್ತದೆ’ ಎಂದು ಅವರು ಬುಧವಾರ ಇಲ್ಲಿ ತಿಳಿಸಿದ್ದಾರೆ.

ವರ್ಷಾಂತ್ಯದವರೆಗೂ ಎಚ್ಚರಿಕೆ ಅಗತ್ಯ

‘ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಕನಿಷ್ಠ 7ರಿಂದ 8 ತಿಂಗಳವರೆಗೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಹಕರಿಸಬೇಕು’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು.

ಪೌರ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮಲ್ಲೇಶ್ವರದಲ್ಲಿ ಬುಧವಾರ ಪಡಿತರ ವಿತರಣೆ ಮಾಡಿದ ಬಳಿಕ ಅವರು ಮಾತನಾಡಿದರು. ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಆಹಾರ ವಿತರಿಸಲು ಅಡುಗೆ ಸಿದ್ಧಪಡಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸೋಂಕಿನ ಪ್ರಮಾಣ ಹಾಗೂ ಸ್ಥಿತಿಗತಿಗಳನ್ನು ಪರಿಶಿಲೀಸಿದ ನಂತರ ಲಾಕ್‍ಡೌನ್ ಹಿಂಪಡೆವ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ. ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಜನರು ಸಹಕರಿಸಬೇಕು. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

‘ಕಾರ್ಮಿಕ ಇಲಾಖೆಯಿಂದ 1.5 ಲಕ್ಷ ಮಂದಿಗೆ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಇದೇ 20ರ ನಂತರ ಕೇಂದ್ರ ಸರ್ಕಾರದ ಪಡಿತರ ವಿತರಣೆ ಮಾಡಲಾಗುವುದು’ ಎಂದರು.

ರೋಗಿಗಳಿಗೆ ವಿನಾಯಿತಿ ನೀಡಲು ಒತ್ತಾಯ

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಜನರ ಆರೋಗ್ಯ ಸ್ಥಿತಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ರೋಗಿಗಳಿಗೆ ಚಿಕಿತ್ಸೆ ಪಡೆಯಲು ಲಾಕ್‍ಡೌನ್‍ನಿಂದ ವಿನಾಯಿತಿ ನೀಡುವಂತೆ ‘ನಾವು ಭಾರತೀಯರು’ ಸಂಘಟನೆ ಒತ್ತಾಯಿಸಿದೆ.

ರಕ್ತನಿಧಿಗಳಲ್ಲಿ ತಿಂಗಳಿಗೆ ಕನಿಷ್ಠ 4 ಸಾವಿರ ಯೂನಿಟ್‍ಗಳಷ್ಟು ರಕ್ತ ಸಂಗ್ರಹವಾಗುತ್ತಿತ್ತು. ಲಾಕ್‍ಡೌನ್‍ನಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಾಗಿಲ್ಲ. ಇದರಿಂದ ರಕ್ತ ಅಗತ್ಯವಿರುವರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ರೋಗಿಗಳಿಗೆ ಔಷಧ ಪಡೆಯಲು ಅನುಮತಿ ನೀಡಿದ್ದರೂ, ಪೊಲೀಸ್ ಇಲಾಖೆಯಿಂದ ಪ್ರಯಾಣಕ್ಕೆ ಅನುಮತಿ ಚೀಟಿ ಪಡೆಯಲು ಪರದಾಡುವಂತಾಗಿದೆ. ಕೊರೊನಾ ಹಿನ್ನೆಲೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ಸೇವೆ ನಿರಾಕರಿಸಲಾಗುತ್ತಿದೆ ಎಂದು ದೂರಿದೆ.

ರೋಗಿಗಳು ಮತ್ತು ಅವರ ಸಹಾಯಕರಿಗೆ ಸರ್ಕಾರ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಬೇಕು. ರಕ್ತನಿಧಿಗಳು, ತುರ್ತು ಸೇವೆ ವಾಹನಗಳು, ಲಸಿಕೆ ಸೇವೆಗಳಿಗೆ ಮೊಟಕಾಗದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ಬರುವ ದೂರುಗಳಿಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಬೇಕು. ಚಿಕಿತ್ಸೆ ನೀಡಲು ಪ್ರತ್ಯೇಕ ಆರೋಗ್ಯ ಪಡೆಯನ್ನು ರಚಿಸಬೇಕು. ದುರ್ಬಲರಿಗೆ ಆಹಾರ ಭದ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.