ADVERTISEMENT

ಡಿಪ್ಲೊಮಾ ನರ್ಸಿಂಗ್‌ ತರಬೇತಿಯೂ ಸ್ಥಗಿತ

ಬಿ.ಎಸ್‌ಸಿ ನರ್ಸಿಂಗ್ ಕೋರ್ಸ್‌ಗಳಿಗಷ್ಟೇ ಸರ್ಕಾರದ ಮಾನ್ಯತೆ

ಚಂದ್ರಹಾಸ ಹಿರೇಮಳಲಿ
Published 9 ಜೂನ್ 2025, 22:35 IST
Last Updated 9 ಜೂನ್ 2025, 22:35 IST
<div class="paragraphs"><p>ನರ್ಸಿಂಗ್‌ </p></div>

ನರ್ಸಿಂಗ್‌

   

ಬೆಂಗಳೂರು: ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ, ಈಗ ಡಿಪ್ಲೊಮಾ ನರ್ಸಿಂಗ್‌ ಶಾಲೆಗಳನ್ನು (ಜಿಎನ್‌ಎಂ) ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜುಗಳಾಗಿ ಉನ್ನತೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಗ್ರಾಮೀಣ ಭಾಗದ ಆರೋಗ್ಯ ಸೇವೆಯ ಭಾಗವಾಗಿದ್ದ ಕಿರಿಯ ಆರೋಗ್ಯ ಸಹಾಯಕಿಯರಾಗಲು (ಎಎನ್‌ಎಂ) ಬಯಸುವ ಯುವತಿಯರಿಗೆ ದಶಕಗಳಿಂದಲೂ ತರಬೇತಿ ನೀಡುತ್ತಿದ್ದ ತರಬೇತಿ ಕೇಂದ್ರಗಳು ಹಾಗೂ ದ್ವಿತೀಯ ಪಿಯುನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಯಾವುದೇ ವಿಷಯ ಕಲಿತ ವಿದ್ಯಾರ್ಥಿನಿಯರಿಗೆ ಡಿಪ್ಲೊಮಾ ನರ್ಸಿಂಗ್‌ ಶಿಕ್ಷಣ ನೀಡುತ್ತಿದ್ದ ಜಿಎನ್‌ಎಂ ತರಬೇತಿ ಶಾಲೆಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿದ್ದು, ಇತಿಹಾಸ ಸೇರಲಿವೆ. 

ADVERTISEMENT

ದ್ವಿತೀಯ ಪಿಯುನಲ್ಲಿ ವಿಜ್ಞಾನ ವಿಷಯ ಓದಿದ ವಿದ್ಯಾರ್ಥಿಗಳು ಮಾತ್ರ ಇನ್ನು ಮುಂದೆ ಶುಶ್ರೂಷಕಿಯರಾಗಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆ ಬರೆದು, ನಾಲ್ಕು ವರ್ಷಗಳ ಬಿ.ಎಸ್‌ಸಿ ನರ್ಸಿಂಗ್‌ ಕೋರ್ಸ್‌ ಪದವಿ ಪೂರೈಸಿದವರನ್ನಷ್ಟೇ ಶುಶ್ರೂಷಣಾ ಅಧಿಕಾರಿಗಳಾಗಿ ನೇಮಕ ಮಾಡಲಾಗುತ್ತದೆ. ಯಾವುದೇ ಆಸ್ಪತ್ರೆ ಸೇರಿದಂತೆ ಆರೋಗ್ಯ ಸೇವೆಯಲ್ಲಿ ಶುಶ್ರೂಷಣೆಯ ಮೊದಲ ಹಂತದ ನೇಮಕಕ್ಕೆ ಬಿ.ಎಸ್‌ಸಿ ನರ್ಸಿಂಗ್‌ ಪದವಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಆರೋಗ್ಯ ಇಲಾಖೆ ಹಾಗೂ ಡಿಪ್ಲೊಮಾ ನರ್ಸಿಂಗ್‌ ತರಬೇತಿ ಶಾಲೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ವಹಿಸುತ್ತಿವೆ. ಆರೋಗ್ಯ ಸೇವೆಯಲ್ಲಿ ವೈದ್ಯರ ನಂತರದ ಮಹತ್ವದ ಸೇವೆಯನ್ನು ಇದುವರೆಗೆ ಈ ಎರಡು ಹಂತದ ಶುಶ್ರೂಷಕಿಯರು ನಿರ್ವಹಿಸುತ್ತಾ ಬಂದಿದ್ದರು. 

‘ಶುಶ್ರೂಷಣಾ ವೃತ್ತಿಯ ಮೊದಲ ಸ್ತರದಲ್ಲೇ ವಿಜ್ಞಾನದ ವಿದ್ಯಾರ್ಥಿಗಳಿಗೆ ಅವಕಾಶ ಇರಬೇಕು. ನರ್ಸಿಂಗ್‌ ಪದವಿ ಪಡೆದವರನ್ನೇ ಅಂತಹ ವೃತ್ತಿಗಳಿಗೆ ಪರಿಗಣಿಸಬೇಕು. ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜುಗಳನ್ನು ಬಲರ್ಧನೆಗೊಳಿಸಬೇಕು. ಅಗತ್ಯ ಮೂಲಸೌಕರ್ಯ, ಬೋಧಕ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಬೇಕು’ ಎಂಬ ಭಾರತೀಯ ನರ್ಸಿಂಗ್‌ ಪರಿಷತ್‌ ಹಾಗೂ ಕರ್ನಾಟಕ ಆಡಳಿತ ಸುಧಾರಣಾ ಆಯೋಗ–2ರ ಶಿಫಾರಸಿನಂತೆ ಇದುವರೆಗೂ ಇದ್ದ ಮೊದಲ ಸ್ತರದ ಎರಡು ನರ್ಸಿಂಗ್‌ ಹಂತಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. 

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯ ಸೂಚನೆಯಂತೆ ಎಲ್ಲ ಜಿಎನ್‌ಎಂ ಕೇಂದ್ರಗಳ ಪ್ರಾಂಶುಪಾಲರು ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜುಗಳಾಗಿ ಉನ್ನತೀಕರಿಸಲು ಕೋರಿ ಪ್ರಸ್ತಾವ ಸಲ್ಲಿಸಿದ್ದಾರೆ. 

ಖಾಸಗಿ ನರ್ಸಿಂಗ್‌ ಸಂಸ್ಥೆಗಳ ಆಕ್ಷೇಪ

ಡಿಪ್ಲೊಮಾ ನರ್ಸಿಂಗ್‌ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಹಲವು ಖಾಸಗಿ ನರ್ಸಿಂಗ್‌ ಶಿಕ್ಷಣ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು, ವಿಜ್ಞಾನ ವಿಷಯ ಹೊರತಾದ ವಿದ್ಯಾರ್ಥಿಗಳು ಮೂರು ವರ್ಷಗಳ ಡಿಪ್ಲೊಮಾ ನರ್ಸಿಂಗ್‌ ಓದಿ, ದೇಶ, ವಿದೇಶಗಳ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆ ಮಾಡುತ್ತಲೇ ಹಲವರು ಬಿ.ಎಸ್‌ಸಿ ಪದವಿಯನ್ನೂ ಪಡೆದಿದ್ದಾರೆ. ಸರ್ಕಾರದ ಇಂತಹ ನಿರ್ಧಾರದಿಂದ ಕಲೆ, ವಾಣಿಜ್ಯ ಮತ್ತಿತರ ಕೋರ್ಸ್‌ಗಳನ್ನು ಕಲಿತ ವಿದ್ಯಾರ್ಥಿಗಳಿಗೆ ನರ್ಸಿಂಗ್‌ ಕ್ಷೇತ್ರದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ. ಬಹು ಬೇಡಿಕೆ ಇರುವ ಈ ಕ್ಷೇತ್ರದಲ್ಲಿ ಶುಶ್ರೂಷಕಿಯರ ಕೊರತೆ ತೀವ್ರವಾಗಿ ಕಾಡಲಿದೆ ಎನ್ನುತ್ತಾರೆ ನರ್ಸಿಂಗ್‌ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥ ಆರ್‌.ಎಂ. ರಾಕೇಶ್. 

ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ

ಎರಡು ವರ್ಷದ ಎಎನ್‌ಎಂ ತರಬೇತಿ, ಮೂರು ವರ್ಷಗಳ ಡಿಪ್ಲೊಮಾ ನರ್ಸಿಂಗ್‌ ತರಬೇತಿ ಪಡೆಯವ ವಿದ್ಯಾರ್ಥಿಗಳಿಗೆ ಸರ್ಕಾರವೇ ಪ್ರತಿ ತಿಂಗಳು ಶಿಷ್ಯ ವೇತನ ನೀಡುತ್ತದೆ. ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನದ ಸೌಲಭ್ಯ ಇಲ್ಲ.

ಸಿಇಟಿ ಮೂಲಕ ಆಯ್ಕೆಯಾದವರಿಗೆ ಸರ್ಕಾರಿ ಕಾಲೇಜುಗಳು ಸಿಕ್ಕರೆ ₹10 ಸಾವಿರ ಶುಲ್ಕ, ಖಾಸಗಿ ಕಾಲೇಜುಗಳಲ್ಲಿ ಸೀಟು ದೊರೆತರೆ ₹1 ಲಕ್ಷ ಶುಲ್ಕ ಭರಿಸಬೇಕು. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ ಎನ್ನುತ್ತಾರೆ ಯಲಹಂಕ ಉಪನಗರದ ಖಾಸಗಿ ಕಂಪನಿ ಉದ್ಯೋಗಿ ಕೆ.ಟಿ. ಜಗದೀಶ್‌.

250 ಸೀಟುಗಳಿಗೆ ಹೆಚ್ಚಳ

ರಾಜ್ಯದಲ್ಲಿ ಈಗಿರುವ ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜಿನಲ್ಲಿ ಗರಿಷ್ಠ
100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿ ಇದೆ. ಎಲ್ಲ ಕಾಲೇಜುಗಳೂ ಸೇರಿ 31,812 ಸೀಟುಗಳು ಲಭ್ಯವಿವೆ. ಹಾಗಾಗಿ, ಪ್ರತಿ ಕಾಲೇಜುಗಳು ಗರಿಷ್ಠ 250 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆ ಅನುಮತಿ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.