ADVERTISEMENT

ನ್ಯಾಯಮೂರ್ತಿಗಳ ನೇಮಕಕ್ಕೆ 10 ಹೆಸರು ಶಿಫಾರಸು; ಒಬಿಸಿಗೆ ಅನ್ಯಾಯ: ಸಿಜೆಗೆ ಪತ್ರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:40 IST
Last Updated 28 ಜನವರಿ 2026, 15:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಕರ್ನಾಟಕ ಹೈಕೋರ್ಟ್‌ ಕೊಲಿಜಿಯಂನಿಂದ ಶಿಫಾರಸುಗೊಂಡಿರುವ 10 ಜನ ವಕೀಲರ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದವರನ್ನು ಕಡೆಗಣಿಸಲಾಗಿದೆ’ ಎಂದು ‘ಬೆಂಗಳೂರು ವಕೀಲರ ಸಂಘ’ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆ) ವಿಭು ಬಖ್ರು ಅವರಿಗೆ ಬುಧವಾರ ಮೂರು ಪುಟಗಳ ಪತ್ರ ಬರೆದಿದ್ದಾರೆ.

‘ವಕೀಲ ವೃಂದದಿಂದ ನೇಮಕಗೊಳ್ಳುವ 10 ಜನರ ಶಿಫಾರಸು ಪಟ್ಟಿಯನ್ನು, ಕರ್ನಾಟಕ ಹೈಕೋರ್ಟ್‌ ಕೊಲಿಜಿಯಂ ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ಕಳುಹಿಸಿದೆ. ಈ ಪ್ರಸ್ತಾವಿತ ಪಟ್ಟಿಯಲ್ಲಿ ಒಬ್ಬರೇ ಒಬ್ಬರೂ ಒಬಿಸಿ ಸಮುದಾಯದವರಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಲಾಗಿದೆ.

ADVERTISEMENT

‘ಇದರಿಂದ ರಾಜ್ಯದಲ್ಲಿ ಶೇಕಡಾ 25ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಒಬಿಸಿ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಕೊಡಮಾಡಿರುವ 15 ಮತ್ತು 16ನೇ ವಿಧಿಗಳ ಪ್ರಯೋಜನವನ್ನು ಉಪೇಕ್ಷಿಸಿದಂತಾಗಿದೆ. ಕರ್ನಾಟಕ ಹೈಕೋರ್ಟ್‌ ಕೊಲಿಜಿಯಂ, ಸಾರ್ವಜನಿಕ ಕಾಳಜಿಯ ಮನೋಭಾವ ಹೊಂದಿದ ನ್ಯಾಯಮೂರ್ತಿಗಳನ್ನು ಹೊಂದಿದೆ. ಇಂತಹ ಕೊಲಿಜಿಯಂ, ಒಬಿಸಿಯಂತಹ ಸಮುದಾಯದಿಂದ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಪಡೆಯಲು ಯಾಕೆ ಪ್ರಯತ್ನ ಮಾಡಿಲ್ಲ’ ಎಂದು ಪ್ರಶ್ನಿಸಲಾಗಿದೆ.

‘ಜಿಲ್ಲಾ ನ್ಯಾಯಾಧೀಶರ ಕೋಟಾ ಹಿರಿತನವನ್ನು ಆಧರಿಸಿರುತ್ತದೆ. ಆದರೆ, ವಕೀಲ ವೃಂದದಿಂದ ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಈಡೇರಿಸಬೇಕಾಗುತ್ತದೆ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಶೈಕ್ಷಣಿಕ, ಆರ್ಥಿಕ ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚು ಅಗತ್ಯವಿರುವ ಸಮಾನತೆ ನೀಡಬೇಕು. ಅತ್ಯಂತ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯದ ಕೊರತೆಯನ್ನು ಸರಿಪಡಿಸಬೇಕು. ಈ ದಿಸೆಯಲ್ಲಿ ಒಬಿಸಿ ವಿಭಾಗದಲ್ಲಿ ಲಭ್ಯವಿರುವ ಇಬ್ಬರು ಪ್ರತಿಭಾವಂತರನ್ನು ಹೆಚ್ಚುವರಿ ಅಭ್ಯರ್ಥಿಗಳಾಗಿ ಪರಿಗಣಿಸಿ ನೇಮಕಾತಿಗಾಗಿ ಕೂಡಲೇ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಲಾಗಿದೆ.

ಎಲ್ಲಿದೆ ಸಮಾನ ಪ್ರಾತಿನಿಧ್ಯ?

‘ಎಲ್ಲರಿಗೂ ಸಮಾನ ಪ್ರಾತಿನಿಧ್ಯ ನೀಡಬೇಕೆಂಬುದು ಇತ್ತೀಚಿನ ಸೂತ್ರವಲ್ಲ. ಈ ಮಾದರಿಯನ್ನು ದಶಕಗಳಿಂದಲೂ ಪಾಲಿಸಲಾಗುತ್ತಿದ್ದು ಇದು ಅವಕಾಶ ವಂಚಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಖಾತರಿಯಾಗಿದೆ. ರಾಜ್ಯ ಮತ್ತು ಕೇಂದ್ರದ ಎಲ್ಲಾ ಸಂಸ್ಥೆಗಳೂ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳದಂತೆ ನೋಡಿಕೊಂಡು ಬರಲಾಗುತ್ತಿದೆ. ನ್ಯಾಯಾಂಗ ಮತ್ತು ಇತರ ಹುದ್ದೆಗಳ ನೇಮಕಾತಿಗಳಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿರುವುದು ಒಂದು ಮೂಲಭೂತ ಸದ್ಗುಣ.  ಇದನ್ನು ಜಾರಿಗೊಳಿಸಲು ನ್ಯಾಯಾಂಗವೇ ತನ್ನ ಅನೇಕ ಐತಿಹಾಸಿಕ ತೀರ್ಪುಗಳಲ್ಲಿ ವಿಶದಪಡಿಸಿದೆ. ಆದರೆ ಇಂತಹುದೊಂದು ಪದ್ಧತಿಯನ್ನು ಈ ಸನ್ನಿವೇಶದಲ್ಲಿ ಸ್ವತಃ ನ್ಯಾಯಾಂಗವೇ ಜಾರಿಗೊಳಿಸದೇ ಹೋಗಿರುವುದು ಸಖೇದಾಶ್ಚರ್ಯ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.