ADVERTISEMENT

ಒಬಿಸಿ: ರಾಜಕೀಯ ಮೀಸಲಿಗೆ ತೂಗುಗತ್ತಿ

ಸ್ಥಳೀಯ ಸಂಸ್ಥೆಗಳ ಚುನಾವಣೆ: ನಿಖರ ಮಾಹಿತಿ ಇದ್ದರಷ್ಟೇ ಮೀಸಲಾತಿಗೆ ‘ಸುಪ್ರೀಂ’ ನಿರ್ದೇಶನ

ವಿ.ಎಸ್.ಸುಬ್ರಹ್ಮಣ್ಯ
Published 11 ಫೆಬ್ರುವರಿ 2022, 20:13 IST
Last Updated 11 ಫೆಬ್ರುವರಿ 2022, 20:13 IST
   

ಬೆಂಗಳೂರು: ನಿಖರ ಅಂಕಿ ಅಂಶಗಳ ಆಧಾರದಲ್ಲಿ ತ್ರಿಸ್ತರದ ಪರಿಶೀಲನೆ ನಡೆಸಿದ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇ 27ರಷ್ಟು ಮೀಸಲಾತಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿರುವುದರಿಂದ ರಾಜ್ಯದಲ್ಲೂ ರಾಜಕೀಯ ಮೀಸಲಾತಿಗೆ ಕಂಟಕ ಎದುರಾಗಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದ ಪಾಲನೆ ಕುರಿತು ಸರ್ಕಾರ ಯೋಚಿಸುತ್ತಿದೆ. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ ಎಂಬುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಶುಕ್ರವಾರ ಬಹಿರಂಗಪಡಿಸಿದ್ದಾರೆ. ನಿಗದಿತ ಅವಧಿಯೊಳಗೆ ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವ ಕೆಲಸ ಆಗದಿದ್ದರೆ, ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ‘ಸಾಮಾನ್ಯ’ ಎಂಬುದಾಗಿ ಘೋಷಿಸಬೇಕಾದ ಇಕ್ಕಟ್ಟು ಸೃಷ್ಟಿಯಾಗಲಿದೆ.

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠವು, ‘ಹಿಂದುಳಿದ ವರ್ಗಗಳ ಜನರಿಗೆ ಶೇ 27ರಷ್ಟು ಸ್ಥಾನಗಳನ್ನು ಮೀಸಲಿಡುವ ತೀರ್ಮಾನವನ್ನು ಸಮರ್ಥಿಸಬಲ್ಲ ನಿಖರ ಅಂಕಿಅಂಶವನ್ನು ಒದಗಿಸಲು ರಾಜ್ಯ ಸರ್ಕಾರ ವಿಫಲವಾದರೆ, ಆ ಎಲ್ಲ ಸ್ಥಾನಗಳನ್ನೂ ‘ಸಾಮಾನ್ಯ’ ಎಂಬುದಾಗಿ ಪರಿಗಣಿಸಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಜ. 19ರಂದು ನೀಡಿರುವ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ADVERTISEMENT

ರಾಹುಲ್‌ ರಮೇಶ್‌ ವಾಘ್‌ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿರುವ ಈ ನಿರ್ದೇಶನವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ.

ಈಗ ರಾಜ್ಯ ಸರ್ಕಾರವೂ ಸುಪ್ರೀಂಕೋರ್ಟ್‌ ನಿರ್ದೇಶನದ ಕುರಿತು ಪರಾಮರ್ಶೆ ನಡೆಸುತ್ತಿದ್ದು, ರಾಜ್ಯದಲ್ಲೂ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೈತಪ್ಪುವ ಆತಂಕ ಎದುರಾಗಿದೆ.

‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ಬಯಸಿದರೆ ಈ ವಿಚಾರದಲ್ಲಿ ತ್ರಿಸ್ತರದ ಪರಿಶೀಲನೆ ಪೂರ್ಣಗೊಳಿಸುವುದು ಕಡ್ಡಾಯ. ಒಂದು ವೇಳೆ ತ್ರಿಸ್ತರದ
ಪರಿಶೀಲನೆಯ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ವಿಫಲವಾದರೆ, ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ‘ಸಾಮಾನ್ಯ ವರ್ಗ’ ಎಂದು ಘೋಷಿಸಿ ಚುನಾವಣೆ ನಡೆಸಬೇಕು.
ಯಾವುದೇ ಕಾರಣಕ್ಕೂ ನಿಗದಿತ ಅವಧಿಯ ಬಳಿಕ ಚುನಾವಣೆ ಮುಂದೂಡುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌, ದಿನೇಶ್‌ ಮಾಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿದೆ.

ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗವು 2021ರ ಮಾರ್ಚ್‌ 4ರ ಬಳಿಕ ಅಧಿಸೂಚನೆ ಹೊರಡಿಸಿರುವ ಎಲ್ಲ ಪ್ರಕರಣಗಳಿಗೂ ಈ ನಿರ್ದೇಶನ ಅನ್ವಯವಾಗುತ್ತದೆ ಎಂದು ಅದೇ ಆದೇಶದಲ್ಲಿ ಸುಪ್ರೀಂಕೋರ್ಟ್‌ ಹೇಳಿದೆ. ಇದರಿಂದಾಗಿಕರ್ನಾಟಕದಲ್ಲೂ ಈ ಆದೇಶವನ್ನು ಮೀರಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವೆ ಎಂಬ
ಜಿಜ್ಞಾಸೆ ರಾಜ್ಯ ಸರ್ಕಾರವನ್ನು ಕಾಡತೊಡಗಿದೆ.

‘ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸುವಾಗ ಹಿಂದುಳಿದಿರುವಿಕೆಯನ್ನು ನಿರ್ಧರಿಸಲುಪ್ರತ್ಯೇಕ ಆಯೋಗವೊಂದನ್ನು ನೇಮಿಸಬೇಕು. ಈಆಯೋಗವು ವಿಸ್ತೃತವಾದ ಪರಿಶೀಲನೆ ಬಳಿಕ ನೀಡುವ ವರದಿ ಆಧರಿಸಿ, ಪ್ರತಿ ಸ್ಥಳೀಯ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣವು ಶೇ 50ರಷ್ಟು ಮೀರುವಂತಿಲ್ಲ’ ಎಂದು ವಿಕಾಸ್‌ ಕೃಷ್ಣರಾವ್‌ ಗಾವಳಿ ಪ್ರಕರಣದಲ್ಲಿ ನೀಡಿರುವ ತ್ರಿಸ್ತರದ ಪರಿಶೀಲನಾ ವಿಧಾನವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ 2021ರ ಏಪ್ರಿಲ್‌ 27ಕ್ಕೆ ಮುಕ್ತಾಯವಾಗಿದೆ. ಕಾನೂನಿನ ಪ್ರಕಾರ ಅದಕ್ಕೆ ಮುನ್ನವೇ ಚುನಾವಣೆ ನಡೆಯಬೇಕಿತ್ತು.

‘ಚುನಾವಣೆ ಸದ್ಯಕ್ಕೆ ಅನುಮಾನ’
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಸದ್ಯಕ್ಕೆ ನಡೆಯುವುದು ಅನುಮಾನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಿಂದುಳಿದ ವರ್ಗಗಳ ಜನರೂ ಸಾಮಾನ್ಯ ವರ್ಗಕ್ಕೆ ಸೇರುತ್ತಾರೆ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿದೆ. ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸಿತ್ತು. ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ ಅಧ್ಯಕ್ಷತೆಯಲ್ಲಿ ಆಯೋಗವನ್ನೂ ರಚಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್‌ ಆದೇಶ ಪಾಲಿಸಿದರೆ ಈ ಸರ್ಕಾರದ ಅವಧಿಯಲ್ಲಿ ಚುನಾವಣೆ ನಡೆಸುವುದು ಕಷ್ಟ. ಈ ಕುರಿತು ಕಾನೂನು ತಜ್ಞರ ಜತೆ ಚರ್ಚಿಸಿದ ಬಳಿಕ ಮುಂದುವರಿಯಬೇಕಿದೆ’ ಎಂದು ಹೇಳಿದರು.
----
ಸರ್ಕಾರದ ಮುಂದಿನ ಆಯ್ಕೆಗಳೇನು?

ಆಯ್ಕೆ–1: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ ಶೇ 27ರಷ್ಟು ಸ್ಥಾನಗಳನ್ನು ‘ಸಾಮಾನ್ಯ ವರ್ಗ’ ಎಂದು ಘೋಷಿಸಿ ಚುನಾವಣೆ ನಡೆಸಬಹುದು. ಹಾಗೆ ಮಾಡಿದಲ್ಲಿ, ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಸಿಗುತ್ತಿರುವ ಮೀಸಲಾತಿ ಕೈತಪ್ಪುತ್ತದೆ.
ಆಯ್ಕೆ–2: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಾಗ ಹಿಂದುಳಿ
ದಿರುವಿಕೆಯನ್ನು ಗುರುತಿಸಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸಿದ ಮಾದರಿಯಲ್ಲೇ ರಾಜಕೀಯ ಹಿಂದುಳಿದಿರುವಿಕೆಯನ್ನೂ ಗುರುತಿಸಲು ಮರು ಸಮೀಕ್ಷೆ ನಡೆಸಬೇಕು. ಅದರ ಬಳಿಕ ರಾಜಕೀಯವಾಗಿ ಹಿಂದುಳಿದಿರುವ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳಿಗೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ನೀಡಬಹುದು. ಆದರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ಈ ಉದ್ದೇಶಕ್ಕೆ ಬಳಸಲಾಗದು ಎನ್ನುತ್ತಾರೆ ತಜ್ಞರು.
---

ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್‌ ನೀಡಿರುವ ಸೂಚನೆ ಕುರಿತು ಪ್ರತಿಪಕ್ಷಗಳು ಚರ್ಚೆ ನಡೆಸಬೇಕು. ಕಾನೂನುಬದ್ಧವಾಗಿಯೇ ಚುನಾವಣೆ ನಡೆಯಬೇಕು
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

ಇಷ್ಟು ವರ್ಷಗಳ ಕಾಲ ಹೇಗೆ ನಡೆದುಬಂದಿದೆಯೋ ಹಾಗೆಯೇ ನಡೆಯಬಹುದು. ಶಿಕ್ಷಣ ಮತ್ತು ಉದ್ಯೋಗಕ್ಕಾದರೆ ಮೀಸಲಾತಿಯ ಮಾನದಂಡ ಬೇರೆಯೇ ಆಗಿರುತ್ತದೆ. ರಾಜಕೀಯ ಮೀಸಲಾತಿಯಲ್ಲಿ ಏನೂ ವ್ಯತ್ಯಾಸ ಆಗಲಿಕ್ಕಿಲ್ಲ
-ಕೆ.ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ದೇಶದಲ್ಲಿ 1931ರಲ್ಲಿ ಜಾತಿ ಗಣತಿ ನಡೆದಿತ್ತು. ಆ ಬಳಿಕ ನಡೆದಿಲ್ಲ. ನಿಖರ ಮಾಹಿತಿ ಇಲ್ಲದೇ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡುವುದಿಲ್ಲ ಎನ್ನುವುದಾದರೆ, ಅದು ಸಾಮಾಜಿಕ ನ್ಯಾಯದ ನಿರಾಕರಣೆ. ಜನಗಣತಿ ಮಾಡದೇ ನಿಖರ ಮಾಹಿತಿ ಎಲ್ಲಿಂದ ಸಿಗಬೇಕು? ಇದು ಹಿಂದುಳಿದವರಿಗೆ ಮೀಸಲಾತಿ ನಿರಾಕರಿಸಲು ಮಾಡಿರುವ ಷಡ್ಯಂತ್ರ.
-ಡಾ.ಸಿ.ಎಸ್‌.ದ್ವಾರಕಾನಾಥ್‌, ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.