ADVERTISEMENT

ಶಿಕ್ಷಕರ ನೇಮಕಾತಿ | ವೃಂದದ ನಿಯಮ ಪ್ರವರ್ಗಕ್ಕೆ ‌ಅನ್ವಯಿಸಿದ್ದು ತಪ್ಪು: ಆಕ್ಷೇಪ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ನೇಮಕಾತಿ ಆದೇಶ: ಮಹಿಳಾ ಅಭ್ಯರ್ಥಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:47 IST
Last Updated 8 ಜನವರಿ 2023, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ವೃಂದದಲ್ಲಿ ಒಂದೇ ಹುದ್ದೆ ಇರುವಾಗ ಪಾಲಿಸಬೇಕಾದ ನಿಯಮವನ್ನು, ಪ್ರವರ್ಗಗಳಲ್ಲಿ ಒಂದೇ ಹುದ್ದೆ ಇರುವ ಕಡೆ ಅನ್ವಯಿಸಲಾಗಿದೆ. ಅಲ್ಲದೆ, ಒಂದು ಹುದ್ದೆ ಹಂಚಿಕೆ ಕುರಿತ ಶೇ 50 ಮಹಿಳಾ ಮೀಸಲಾತಿ ಪ್ರಕರಣ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ’ ಎಂದು ಕೆಲವು ಮಹಿಳಾ ಅಭ್ಯರ್ಥಿಗಳು ಆರೋಪಿಸಿದ್ದಾರೆ.

1995ರ ನ. 16 ರ ನೇಮಕಾತಿ ನಿಯಮಗಳ ಪ್ರಕಾರ, ಒಂದು ವೃಂದದಲ್ಲಿ ಒಂದು ಹುದ್ದೆ ಮಾತ್ರ ಇದ್ದರೆ ಆಗ ಮೀಸಲಾತಿ ಅನ್ವಯಿಸುವಂತಿಲ್ಲ. ಪ್ರವರ್ಗಗಳಲ್ಲಿ ಒಂದು ಹುದ್ದೆ ಇದ್ದಾಗ ವೃಂದದಲ್ಲಿ ಇರುವ ನಿಯಮ ಅನ್ವಯಿಸುವುದಿಲ್ಲ. 2002ರ ನ. 22 ರ ಆದೇಶದ ಪ‍್ರಕಾರ ಮಹಿಳೆಯರಿಗೆ ಮೀಸಲಿರಿಸಿದ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಲಭ್ಯ ಇಲ್ಲದಿದ್ದರೆ ಆಯಾ ವರ್ಗಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಂದ ಆ ಹುದ್ದೆಯನ್ನು ಭತಿ೯ ಮಾಡಬಹುದು.

‘2015ರಲ್ಲಿ ಪದವೀಧರ ಶಿಕ್ಷಕರ ಹುದ್ದೆಗೆ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ 50 ಮಹಿಳಾ ಮೀಸಲಾತಿಯಂತೆ ಸಮಾಜ ವಿಜ್ಞಾನ ವಿಷಯದಲ್ಲಿ ಹುದ್ದೆ ಹಂಚಿಕೆ ಮಾಡಲಾಗಿತ್ತು. ಅದರಂತೆ, ಮೆರಿಟ್ ಇದ್ದ ಪುರುಷ ಅಭ್ಯರ್ಥಿ ತಾರಾನಾಥ ಬದಲಿಗೆ ಕೃಪಾ ಎಂಬ ಮಹಿಳೆಗೆ ಹುದ್ದೆ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ತಾರಾನಾಥ ಅವರು ಕೆಎಟಿ ಮೆಟ್ಟಿಲೇರಿದ್ದರು. ಸಂವಿಧಾನದ ಸೆಕ್ಷನ್‌ 14, 15 ರ ಅನ್ವಯ ಪುರುಷ ಅಭ್ಯರ್ಥಿ ಪರ ಮೆರಿಟ್ ಆಧಾರದಲ್ಲಿ ಹುದ್ದೆ ನೀಡಬೇಕು ಎಂದು 2020ರ ಮಾರ್ಚ್ 12ರಂದು ಕೆಎಟಿ ಆದೇಶ ನೀಡಿತ್ತು. ಹೀಗಾಗಿ, ಹುದ್ದೆ ಸೃಜಿಸಿ ತಾರಾನಾಥ ಅವರಿಗೂ ನೇಮಕಾತಿ ಆದೇಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಪ್ರಕರಣ ಇನ್ನೂ ಇತ್ಯರ್ಥ ಆಗಿಲ್ಲ.

ADVERTISEMENT

ಈ ಮಧ್ಯೆ, ಮಹಿಳಾ ಮೀಸಲಾತಿ ಪಾಲಿಸದೆ, ಕೆಎಟಿ ನೀಡಿದ್ದ ಆದೇಶದಂತೆ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಒಂದು ಹುದ್ದೆ ಇರುವ ಕಡೆ ಮೆರಿಟ್ ಇರುವವರಿಗೆ ನೇಮಕಾತಿ ನೀಡಲಾಗಿದೆ’ ಎಂದು ರಾಮನಗರ ಜಿಲ್ಲೆಯ ಜೀವವಿಜ್ಞಾನ ಶಿಕ್ಷಕ ಹುದ್ದೆ ಆಕಾಂಕ್ಷಿಗಳಾದ ಪವಿತ್ರಾ, ಉಷಾ, ಸಮಾಜ ವಿಜ್ಞಾನ ಶಿಕ್ಷಕ ಹುದ್ದೆ ಆಕಾಂಕ್ಷಿ ಸ್ವಪ್ನಾ ದೂರಿದ್ದಾರೆ. ಇಲಾಖೆ ಮಾಡಿದ ತಪ್ಪಿನಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಮಹಿಳಾ ಅಭ್ಯರ್ಥಿಗಳು ಹುದ್ದೆ ವಂಚಿತರಾಗಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆಗೆ ಶಿಕ್ಷಣ ಇಲಾಖೆಯ ಆಯುಕ್ತ ಆರ್‌. ವಿಶಾಲ್‌ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.