ADVERTISEMENT

ತುಂಗಾ ಜಲಾಶಯದ ಹಿನ್ನೀರು ಪ್ರದೇಶ | ವಾಟರ್ ಬೋಟಿಂಗ್‌ಗೆ ಆಕ್ಷೇಪ: ನೋಟಿಸ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ವಾಟರ್ ಬೋಟಿಂಗ್‌</p></div>

ವಾಟರ್ ಬೋಟಿಂಗ್‌

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಗಾಜನೂರಿನ ಸಕ್ರೆಬೈಲು ಆನೆ ಶಿಬಿರದ ಬಳಿಯ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್‌ನವರು ‘ವಾಟರ್ ಬೋಟಿಂಗ್’ ನಡೆಸುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ADVERTISEMENT

ಈ ಸಂಬಂಧ ಗಾಜನೂರಿನ ಅಗ್ರಹಾರದ ಗಂಗಾ ಪರಮೇಶ್ವರಿ ಮೀನುಗಾರರ ಸಂಘ ನಿಯಮಿತದ ಅಧ್ಯಕ್ಷ ಅರಸಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ನಾಗರಾಜ್ ಎಸ್.ಜೈನ್ ಅವರ ವಾದ ಆಲಿಸಿದ ನ್ಯಾಯಪೀಠ, ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್‌, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಭದ್ರಾ ಜಲಾಯಶಯದ ಹಿನ್ನೀರಿನ ವ್ಯಾ‌ಪ್ತಿಯಲ್ಲಿ ಅರ್ಜಿದಾರ ಸಂಘದ ಸದಸ್ಯರು ಅನೇಕ ವರ್ಷಗಳಿಂದ ತೆಪ್ಪಗಳನ್ನು ಬಳಸಿ ಹರಿಗೋಲು ಗಿಲ್‌ನೆಟ್ ಮೂಲಕ ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನವರು ಇಲ್ಲಿ 2022ರಿಂದ ವಾಟರ್ ಬೋಟಿಂಗ್ ಚಟುವಟಿಕೆ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರಿಕೆಗೆ ಸಮಸ್ಯೆ ಉಂಟಾಗುತ್ತಿದ್ದು, ಅರ್ಜಿದಾರ ಸಂಘದ ಸದಸ್ಯರ ಬದುಕಿನ ಪ್ರಶ್ನೆಯಾಗಿದೆ. ಅಲ್ಲದೇ, ಈ ಭಾಗದಲ್ಲಿ ಬೋಟಿಂಗ್ ಚಟುವಟಿಕೆ ನಡೆಸುವುದರಿಂದ ಪರಿಸರ, ಕುಡಿಯುವ ನೀರಿನ ವಲಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ‘ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಕರ್ನಾಟಕ ನೀರಾವರಿ ನಿಗಮವು ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್ ಚಟುವಟಿಕೆ ನಡೆಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗೆ ಅನುಮತಿ ನೀಡಿ 2022ರ ಮೇ 18ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಈ ಅರ್ಜಿಯ ವಿಚಾರಣೆ ಮುಗಿಯುವ ತನಕ ಬೋಟಿಂಗ್ ಚಟುವಟಿಕೆ ನಡೆಸದಂತೆ ರೆಸಾರ್ಟ್‌ನವರಿಗೆ ನಿರ್ಬಂಧ ಹೇರಬೇಕು‘ ಎಂದು ಮಧ್ಯಂತರ ಮನವಿ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.