
ಬೆಂಗಳೂರು: ಒಡಿಶಾ ಸಂಸ್ಕೃತಿ, ಸಂಪ್ರದಾಯ, ಪ್ರವಾಸೋದ್ಯಮದ ಅವಕಾಶಗಳನ್ನು ಕರ್ನಾಟಕದ ಜನರಿಗೆ ಪರಿಚಯಿಸಲು ಒಡಿಶಾ ರಾಜ್ಯ ಪ್ರವಾಸೋದ್ಯಮ ಇಲಾಖೆ ಇಲ್ಲಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನ.15ರಿಂದ 17ರವರೆಗೆ ‘ಒಡಿಶಾ ಪರಬ್’ ಉತ್ಸವ ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪಾರಿದಾ, ‘ಒಡಿಶಾ ಶ್ರೀಮಂತ ಪರಂಪರೆ ಹೊಂದಿರುವ ರಾಜ್ಯ. ಕರ್ನಾಟಕದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡಬೇಕು. ಅಲ್ಲಿನ ಕಲೆ, ಸಂಸ್ಕೃತಿಯನ್ನು ಅರಿಯಬೇಕು. ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬುದು ನಮ್ಮ ಆಶಯ. ಜತೆಗೆ ಹೂಡಿಕೆಗೂ ವಿಫುಲ ಅವಕಾಶಗಳು ಇದ್ದು, ಇಲ್ಲಿನ ಉದ್ಯಮಿಗಳನ್ನು ಹೂಡಿಕೆಗಾಗಿ ಆಹ್ವಾನಿಸುತ್ತಿದ್ದೇವೆ’ ಎಂದರು.
ಪರಬ್ ಉತ್ಸವದಲ್ಲಿ ಕೈಮಗ್ಗ ನೇಯ್ಗೆಗಳು, ಕರಕುಶಲ ವಸ್ತುಗಳು, ಬೆಳ್ಳಿ ಫಿಲಿಗ್ರಿ, ಮರ ಮತ್ತು ಕಲ್ಲಿನ ಕೆತ್ತನೆಗಳು, ತಾಳೆಗರಿ ಬರಹಗಳು, ಮರದ ಸಾಂಪ್ರದಾಯಿಕ ಆಟಿಕೆಗಳು, ಸಂಬಲ್‌ಪುರಿ ಟೈ ಮತ್ತು ಡೈ ಸೀರೆಗಳು, ಟಸ್ಸರ್ ಮತ್ತು ರೇಷ್ಮೆ ಬಟ್ಟೆಗಳು, ಜಗತ್‌ಸಿಂಗ್ ಪುರದ ಚಿನ್ನದ ಹಲ್ಲುಗಳು, ಧೆಂಕನಲ್ ದೋಕ್ರಾ ಮತ್ತು ಪುರಿಯ ಪುಟ್ಟಚಿ ಚಿತ್ರಗಳು, ನಬರಂಗ್‌ಪುರದ ಬುಡಕಟ್ಟು ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಉತ್ಸವದಲ್ಲಿ ಒಡಿಶಾ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಒಡಿಸ್ಸಿ, ಗೋಟಿಪುವಾ, ಛೌ, ಸಂಬಲ್‌ಪುರಿ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ಇರುತ್ತದೆ. ಪ್ರಮುಖ ಪ್ರವಾಸಿ ತಾಣಗಳು, ಉತ್ಪನ್ನಗಳ ಕುರಿತು ಮಾಹಿತಿ ಸಿಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಡಿಶಾ ಸರ್ಕಾರದ ಅಭಿವೃದ್ಧಿ ಆಯುಕ್ತೆ ಅನು ಗರ್ಗ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಬಲವಂತ್ ಸಿಂಗ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.