ADVERTISEMENT

ಪೆಟ್ರೋಲ್‌, ಡೀಸೆಲ್‌ ತುಸು ಅಗ್ಗ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:30 IST
Last Updated 19 ಅಕ್ಟೋಬರ್ 2018, 19:30 IST
   

ಬೆಂಗಳೂರು: ಗಗನಮುಖಿಯಾಗಿದ್ದ ಇಂಧನ ದರಗಳು ಇದೀಗ ಎರಡು ದಿನಗಳಿಂದ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಕಾಣಲಾರಂಭಿಸಿವೆ. ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಆಗಿದೆ ಎನ್ನುವ ಕಾರಣ ನೀಡಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳುದರದಲ್ಲಿ ಇಳಿಕೆ ಮಾಡುತ್ತಿವೆ.

ಗುರುವಾರ ಪೆಟ್ರೊಲ್‌ ದರ ಲೀಟರಿಗೆ 21 ಪೈಸೆ ಮತ್ತು ಡೀಸೆಲ್‌ ದರ 11 ಪೈಸೆಯಷ್ಟು ಕಡಿಮೆ ಮಾಡಿವೆ. ಶುಕ್ರವಾರ ಪೆಟ್ರೋಲ್‌ ಲೀಟರಿಗೆ 24 ಪೈಸೆ ಮತ್ತು ಡೀಸೆಲ್‌ ಲೀಟರಿಗೆ 10 ಪೈಸೆಯಷ್ಟು ಕಡಿಮೆಯಾಗಿದೆ. ಇದರಿಂದ ಒಟ್ಟಾರೆ ಪೆಟ್ರೋಲ್‌ಗೆ 45 ಪೈಸೆ ಮತ್ತು ಡೀಸೆಲ್‌ಗೆ 21 ಪೈಸೆ ಕಡಿಮೆಯಾದಂತಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವೂ ಇಳಿಕೆ ಕಾಣುತ್ತಿದೆ. ನವೆಂಬರ್‌ನಲ್ಲಿ ವಿತರಣೆ ಮಾಡುವ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ ಗುರುವಾರ 11 ಸೆಂಟ್‌ನಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ ₹ 69.64ಕ್ಕೆ ಇಳಿದಿತ್ತು.

ADVERTISEMENT

ಡಿಸೆಂಬರ್‌ಗೆ ವಿತರಿಸಲಿರುವ ಬ್ರೆಂಟ್‌ ತೈಲದ ದರ ಬ್ಯಾರೆಲ್‌ಗೆ 79.89ರಷ್ಟಿದೆ. ತಿಂಗಳ ಆರಂಭದಲ್ಲಿ ನಾಲ್ಕು ವರ್ಷಗಳ ಗರಿಷ್ಠ ಮಟ್ಟವಾದ ಬ್ಯಾರೆಲ್‌ಗೆ 86.74 ಕ್ಕೆ ಏರಿಕೆಯಾಗಿತ್ತು.

ಕೇಂದ್ರ ಸರ್ಕಾರ ಅಕ್ಟೋಬರ್‌ 5 ರಂದು ಪ್ರತಿ ಲೀಟರಿ ಇಂಧನ ದರವನ್ನು ₹2.50ರಷ್ಟು ಇಳಿಕೆ ಮಾಡಿತ್ತು. ಆದರೆ, ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ದಿನವೂ ದರ ಪರಿಷ್ಕರಣೆ ಮಾಡುವುದರಿಂದ ತೈಲ ದರಗಳು ಏರಿಕೆಯಾಗುತ್ತಲೇ ಇದ್ದವು.

**

ರೂಪಾಯಿ ಚೇತರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಶುಕ್ರವಾರ 29 ಪೈಸೆ ಚೇತರಿಕೆ ಕಂಡುಕೊಂಡಿತು. ಇದರಿಂದ ಒಂದು ಡಾಲರ್‌ಗೆ 73.32ರಂತೆ ವಿನಿಮಯಗೊಂಡಿತು.

ರಫ್ತುದಾರರು ಮತ್ತು ಬ್ಯಾಂಕ್‌ಗಳು ಡಾಲರ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದ್ದಾರೆ. ಇದರ ಜತೆಗೆ ದೇಶಿ ಮಾರುಕಟ್ಟೆಗೆ ವಿದೇಶಿ ಬಂಡವಾಳ ಒಳಹರಿವು ಸಹ ರೂಪಾಯಿ ಮೌಲ್ಯ ವೃದ್ಧಿಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ.

ಬುಧವಾರ 13 ಪೈಸೆ ಕಡಿಮೆಯಾಗಿ ಒಂದು ಡಾಲರ್‌ಗೆ 73.61ಕ್ಕೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.