
ಬೆಂಗಳೂರು: ‘ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೃತ ಉದ್ಯೋಗಿ ಕೆ.ಅರವಿಂದ್ ಬಿಟ್ಟು ಹೋಗಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರ ನಿಜವಲ್ಲ’ ಎಂಬ ಕಂಪನಿಯ ಪರ ವಾದಕ್ಕೆ ತಿರುಗೇಟು ನೀಡಿರುವ ಮೃತನ ಪರ ವಕೀಲರು, ‘ಓಲಾ ಕಂಪನಿ, ಈಸ್ಟ್ ಇಂಡಿಯಾ ಕಂಪನಿಗಿಂತಲೂ ಕೆಟ್ಟದಾದ ವರ್ತನೆ ತೋರುತ್ತಿದೆ’ ಎಂದು ಕಂಪನಿಯ ನಿಲುವಿಗೆ ವಾಗ್ದಾಳಿ ನಡೆಸಿದರು.
‘ಅರವಿಂದ್ ಸಾವಿನ ಆರೋಪದಡಿ ನಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಮತ್ತು ಈ ಸಂಬಂಧ 30ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಕಂಪನಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭವಿಶ್ ಅಗರವಾಲ್ ಮತ್ತು ಓಲಾ ಕಂಪನಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕಂಪನಿಯ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್, ‘ಡೆತ್ ನೋಟ್‌ಗಳೆಲ್ಲಾ ಸತ್ಯವಾಗಿರುವುದಿಲ್ಲ. ಈ ಪ್ರಕರಣದಲ್ಲಿ ಡೆತ್ ನೋಟ್‌ನ ನಿರೂಪಕ ಮೃತ ಕೆ.ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಎಂಬ ಬಗ್ಗೆ ನನಗೆ ಬಲವಾದ ಸಂದೇಹವಿದೆ’ ಎಂದರು.
ಇದನ್ನು ತೀವ್ರವಾಗಿ ಆಕ್ಷೇಪಿಸಿದ ಅಶ್ವಿನ್ ಕಣ್ಣನ್ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್, ‘ಅರ್ಜಿದಾರರ ಪರ ವಕೀಲರು ಇಂತಹ ಮಾತುಗಳನ್ನು ಆಡುತ್ತಿರುವುದಕ್ಕೆ ನನಗೆ ತುಂಬಾ ವಿಷಾದವಿದೆ. ಹಿರಿಯ ವಕೀಲರಾಗಿ ಅವರು ಈ ರೀತಿ ವಾದ ಮಂಡಿಸಬಾರದು. ಓಲಾ ಕಂಪನಿ, ಈಸ್ಟ್ ಇಂಡಿಯಾ ಕಂಪನಿಗಿಂತಲೂ ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಆರೋಪಿ ಪರ ವಕೀಲರು ಇಂತಹ ಆರೋಪಗಳನ್ನು ಮಾಡುತ್ತಿರುವುದು ವಿಷಾದನೀಯ. ಡೆತ್ ನೋಟ್ ಬರೆದವರು ಯಾರು ಎಂಬುದನ್ನು ಪೊಲೀಸರು ತನಿಖೆ ಮಾಡಲಿ’ ಎಂದರು.
ಇದಕ್ಕೆ ಶ್ಯಾಮಸುಂದರ್, ‘ದೂರುದಾರರು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ಸಂದರ್ಶನಗಳು ಮತ್ತು ಛಾಯಾಚಿತ್ರಗಳಿಂದಾಗಿ ಕಂಪನಿಯ ಷೇರು ಬೆಲೆಗಳು ಕುಸಿಯುತ್ತಿವೆ’ ಎಂದು ಆರೋಪಿಸಿದರು.
ಪ್ರಾಸಿಕ್ಯೂಷನ್ ಪರ ಹಾಜರಾಗಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ನೀಡಲಾಗಿರುವ ನೋಟಿಸ್‌ಗಳಿಗೆ ಪ್ರತಿಯಾಗಿ, ಅರ್ಜಿದಾರರು ಖುದ್ದು ಹಾಜರಾಗುವ ಬದಲು ಪತ್ರಗಳನ್ನು ಕಳುಹಿಸುತ್ತಿದ್ದಾರೆ’ ಎಂದು ನ್ಯಾಯಪೀಠಕ್ಕೆ ದೂರಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನೀಡಿರುವ ಈ ಹಿಂದಿನ ನಿರ್ದೇಶನವನ್ನು ಮುಂದುವರಿಸಲು ಆದೇಶಿಸಿ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು.
ಪ್ರಕರಣವೇನು?: ‘ನನಗೆ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗುತ್ತಿದೆ, ಸಂಬಳ ಬಾಕಿ ಉಳಿಸಿಕೊಳ್ಳಲಾಗಿದೆ ಹಾಗೂ ಕಂಪನಿ ಮಾಲೀಕರು ಸವಲತ್ತುಗಳನ್ನು ನಿರಾಕರಿಸಿದ್ದಾರೆ’ ಎಂದು ಆರೋಪಿಸಿ ಕೆ.ಅರವಿಂದ್ ಪತ್ರವೊಂದನ್ನು ಬರೆದಿಟ್ಟು 2025ರ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕೆ.ಅರವಿಂದ್ ಅವರ ಸಹೋದರ ಅಶ್ವಿನ್ ನೀಡಿರುವ ದೂರಿನ ಮೇರೆಗೆ, ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಕಲಂ 108 ಹಾಗೂ 3(5)ರ ಅಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.