ADVERTISEMENT

ಓಲಾ ಉದ್ಯೋಗಿ ಸಾವು | ವರದಿ ಆಧರಿಸಿ ಮುಂದುವರಿಯಿರಿ: ಪ್ರಾಸಿಕ್ಯೂಷನ್‌ಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 14:36 IST
Last Updated 17 ನವೆಂಬರ್ 2025, 14:36 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮೃತ ಉದ್ಯೋಗಿ ಕೆ.ಅರವಿಂದ್ ಸಾಯುವ ಮುನ್ನ ಬರೆದಿಟ್ಟಿದ್ದರು ಎನ್ನಲಾದ ಆತ್ಮಹತ್ಯೆ ಪತ್ರದ ಕುರಿತಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಏನು ತಿಳಿಸುತ್ತದೆಯೋ ಅದನ್ನು ಆಧರಿಸಿ ತನಿಖೆ ಮುಂದುವರಿಸಿ’ ಎಂದು ಹೈಕೋರ್ಟ್‌, ರಾಜ್ಯ ಪ್ರಾಸಿಕ್ಯೂಷನ್‌ಗೆ ಆದೇಶಿಸಿದೆ.

‘ಅರವಿಂದ್ ಸಾವಿನ ಆರೋಪದಡಿ ನಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ 30ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಕಂಪನಿಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್‌, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭವಿಶ್‌ ಅಗರವಾಲ್‌ ಮತ್ತು ಓಲಾ ಕಂಪನಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರತಿವಾದಿ ಅಶ್ವಿನ್‌ ಕಣ್ಣನ್‌ (ಮೃತ ಅರವಿಂದ್ ಸಹೋದರ) ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಅರವಿಂದ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ಕೈಬರಹದ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ’ ಎಂದರು.

ADVERTISEMENT

ಇದಕ್ಕೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್, ‘ಈ ಪ್ರಕರಣವು ಭಾರತೀಯ ದಂಡ ಸಂಹಿತೆ–1860ರ (ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ) ಕಲಂ 306ಕ್ಕೆ ಅನ್ವಯ ಆಗುವುದಿಲ್ಲ’ ಎಂದು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅಂತಿಮ ವರದಿ ಕೈಸೇರಲಿ. ಒಂದು ವೇಳೆ ಪ್ರಾಸಿಕ್ಯೂಷನ್‌ ದೋಷಾರೋಪ ಪಟ್ಟಿ ಸಲ್ಲಿಸಿದರೆ ಅದನ್ನು ಸಕ್ಷಮ ನ್ಯಾಯಾಲಯದಲ್ಲಿ ಪ್ರಶ್ನಿಸಿ. ಆಗ ಬೇಕಿದ್ದರೆ ಈ ಅರ್ಜಿಯನ್ನು ವಜಾಗೊಳಿಸುತ್ತೇನೆ’ ಎಂದು ‌ಶ್ಯಾಮಸುಂದರ್‌ ಅವರಿಗೆ ಸೂಚಿಸಿತು.

ಅಂತೆಯೇ, ‘ಎಫ್‌ಎಸ್‌ಎಲ್‌ ವರದಿಯನ್ನು ಆಧರಿಸಿ ತನಿಖೆ ಮುಂದುವರಿಸಿ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ಕೆ.ರಾಹುಲ್‌ ರೈ ಅವರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು. ‘ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಈ ಹಿಂದಿನ ಆದೇಶವನ್ನು ಇದೇ ವೇಳೆ ನ್ಯಾಯಪೀಠ ವಿಸ್ತರಿಸಿತು.

ಪ್ರಕರಣವೇನು?:

 ‘ನನಗೆ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗುತ್ತಿದೆ, ಸಂಬಳ ಬಾಕಿ ಉಳಿಸಿಕೊಳ್ಳಲಾಗಿದೆ ಹಾಗೂ ಕಂಪನಿ ಮಾಲೀಕರು ಸವಲತ್ತುಗಳನ್ನು ನಿರಾಕರಿಸಿದ್ದಾರೆ’ ಎಂದು ಆರೋಪಿಸಿ ಕೆ.ಅರವಿಂದ್‌ ಪತ್ರವೊಂದನ್ನು ಬರೆದಿಟ್ಟು 2025ರ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕೆ.ಅರವಿಂದ್ ಅವರ ಸಹೋದರ ಅಶ್ವಿನ್‌ ನೀಡಿರುವ ದೂರಿನ ಮೇರೆಗೆ, ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್‌) ಕಲಂ 108 ಹಾಗೂ 3(5)ರ ಅಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.