ADVERTISEMENT

ಹೊಸ ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ಚಾವಣಿ ಏರಿ ಪ್ರತಿಭಟಿಸಿದ ವೃದ್ಧೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 20:16 IST
Last Updated 16 ಅಕ್ಟೋಬರ್ 2020, 20:16 IST
ಕಲಬುರ್ಗಿ ತಾಲ್ಲೂಕು ಫಿರೋಜಾಬಾದ್‌ ಗ್ರಾಮದ ವೃದ್ಧೆ ಕಲ್ಲಮ್ಮ ಹೊಸ ಮನೆ ಕಟ್ಟಿಸಿಕೊಡಬೇಕೆಂದು ಆಗ್ರಹಿಸಿ ತಮ್ಮ ಹಳೆ ಮನೆಯ ಚಾವಣಿ ಮೇಲೆ ಕುಳಿತು ಪ್ರತಿಭಟಿಸಿದರು.
ಕಲಬುರ್ಗಿ ತಾಲ್ಲೂಕು ಫಿರೋಜಾಬಾದ್‌ ಗ್ರಾಮದ ವೃದ್ಧೆ ಕಲ್ಲಮ್ಮ ಹೊಸ ಮನೆ ಕಟ್ಟಿಸಿಕೊಡಬೇಕೆಂದು ಆಗ್ರಹಿಸಿ ತಮ್ಮ ಹಳೆ ಮನೆಯ ಚಾವಣಿ ಮೇಲೆ ಕುಳಿತು ಪ್ರತಿಭಟಿಸಿದರು.   

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಕಲ್ಲಮ್ಮ ಎಂಬ ಈ ಅಜ್ಜಿ ಶುಕ್ರವಾರ ತಮ್ಮ ಮುರುಕಲು ಮನೆಯ ಚಾವಣಿ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಅತಿವೃಷ್ಟಿ ಹಾಗೂ ಭೀಮಾ ಪ್ರವಾಹದಿಂದಾಗಿ ತಮ್ಮ ಮನೆ ಹಾಳಾಗಿದ್ದು, ಹೊಸ ಮನೆ ಕಟ್ಟಿಸಿಕೊಡಬೇಕು ಎಂಬುದು ಅವರ ಬೇಡಿಕೆ.

ಕಂದಾಯ ಸಚಿವ ಆರ್‌.ಅಶೋಕ ಅವರು ಶುಕ್ರವಾರ ಪ್ರವಾಹ ನಷ್ಟದ ಸಮೀಕ್ಷೆಗೆ ಫಿರೋಜಾಬಾದ್‌ ಗ್ರಾಮಕ್ಕೆ ಬಂದಾಗಲೂ ಈ ಅಜ್ಜಿ ಮನೆ ಮೇಲೆಯೇ ಕುಳಿತಿದ್ದರು. ಆದರೆ, ಅವರನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.

’ಪ್ರತಿ ವರ್ಷವೂ ಪ್ರವಾಹದಿಂದ ನಾವು ಬೇಸತ್ತುಹೋಗಿದ್ದೇವೆ. ಈ ಬಾರಿ ನನ್ನ ಮನೆ ಸಂಪೂರ್ಣ ಕುಸಿದಿದೆ. ವಾಸಕ್ಕೆ ಸುರಕ್ಷಿತ ಜಾಗವಿಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ‘ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.‌

ADVERTISEMENT

ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸಚಿವರು ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದದ್ದು ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.