ADVERTISEMENT

ಸಂಪುಟದ ತೀರ್ಮಾನಕ್ಕೆ ಒಪಿಎಸ್‌: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 16:12 IST
Last Updated 28 ಫೆಬ್ರುವರಿ 2026, 16:12 IST
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಅವರು ಸುವರ್ಣ ಸಂಭ್ರಮದ ಲೋಗೊ ಬಿಡುಗಡೆ ಮಾಡಿದರು. ಚಂದ್ರಶೇಖರ ನುಗ್ಗಲಿ,  ಮಧು ಬಂಗಾರಪ್ಪ, ಪುಟ್ಟಣ್ಣ, ಡಿ.ಕೆ.ಶಿವಕುಮಾರ್‌ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಅವರು ಸುವರ್ಣ ಸಂಭ್ರಮದ ಲೋಗೊ ಬಿಡುಗಡೆ ಮಾಡಿದರು. ಚಂದ್ರಶೇಖರ ನುಗ್ಗಲಿ,  ಮಧು ಬಂಗಾರಪ್ಪ, ಪುಟ್ಟಣ್ಣ, ಡಿ.ಕೆ.ಶಿವಕುಮಾರ್‌ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಮರುಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

‘ಶಿಕ್ಷಕರ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ನಾನು ಹಿಂದೆ ಹಣಕಾಸು ಸಚಿವನಾಗಿದ್ದಾಗ ಐದು ವರ್ಷಗಳಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದೆ. 6 ಮತ್ತು 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ವೇತನ ಬಡ್ತಿ ಸೇರಿದಂತೆ ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ 12ರಿಂದ 15ರಷ್ಟಿದ್ದ ಸಾಕ್ಷರತಾ ಪ್ರಮಾಣ ಪ್ರಸ್ತುತ ಶೇ 74ರಷ್ಟಿದೆ. ಮಕ್ಕಳಿಗೆ ಉತ್ತಮ ಬೋಧನೆ ನೀಡುವ ಜತೆಗೆ ಶಿಕ್ಷಕನ ನಡವಳಿಕೆಯೂ ಉತ್ತಮವಾಗಿರಬೇಕು. ವಿಷಯಗಳನ್ನು ತರ್ಕ, ಪ್ರಶ್ನೆ ಮಾಡಿ ಒಪ್ಪಿಕೊಳ್ಳಬೇಕು. ಮಕ್ಕಳಿಗೂ ಅದನ್ನೇ ಕಲಿಸಬೇಕು. ವೈಚಾರಿಕ, ವೈಜ್ಞಾನಿಕ ಶಿಕ್ಷಣ ನೀಡಿದರೆ ಸುಭದ್ರ, ಸುಂದರ ಸಮಾಜ, ದೇಶವನ್ನು ಕಟ್ಟಬಹುದು. ಸಮಾಜದಲ್ಲಿನ ಜಾತಿ, ಮೌಢ್ಯ, ಕಂದಾಚಾರಗಳನ್ನು ದೂರ ಮಾಡುವ ಮಕ್ಕಳನ್ನು ತಯಾರು ಮಾಡಬಹುದು ಎಂದರು.

ಸಿದ್ದರಾಮಯ್ಯಗೆ ‘ಶಿಕ್ಷಣ ರಾಮಯ್ಯ’, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ‘ಸಂಘ ಮಿತ್ರ’, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಗುರುಕುಲ’, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣಗೆ ‘ಶಿಕ್ಷಕ ಸೈನಿಕ’ ಬಿರುದು ನೀಡಿ ಗೌರವಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಎಐಪಿಟಿಎಫ್‌ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ವಿಧಾನ ಪರಿಷತ್‌ ಸದಸ್ಯ ರಾಮೋಜಿ ಗೌಡ. ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌  ಉಪಸ್ಥಿತರಿದ್ದರು.

ಶಿಕ್ಷಣದ ತಳಪಾಯ ಮುಖ್ಯ: ಬರಗೂರು

‘ಶಿಕ್ಷಣದ ತಳಪಾಯವಾದ ಪ್ರಾಥಮಿಕ ಶಿಕ್ಷಣಕ್ಕೆ ಯಾವತ್ತೂ ಅಪಾಯ ಬರಬಾರದು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಹತ್ಯೆಯೂ ಆಗಬಾರದು ಆತ್ಮಹತ್ಯೆಯೂ ಆಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. 

‘ಕೆಪಿಎಸ್‌ನಿಂದ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂಬ ಆತಂಕವಿದೆ. ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳುತ್ತಿದ್ದಾರೆ. ಅವರನ್ನು ನಂಬೋಣ. ಆದರೆ ಕೆಲವರು ಶಾಲೆಗಳು ಮುಚ್ಚಲಿವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ? ಪರಸ್ಪರ ಚರ್ಚೆ ಮೂಲಕ ಗೊಂದಲಗಳನ್ನು ಪರಿಹರಿಸಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಜತೆಗೂ ಸಭೆ ನಡೆಸಬೇಕು’ ಎಂದರು.

ಚುನಾವಣಾ ಕೆಲಸಕ್ಕೆ ಅನಿವಾರ್ಯ: ಶಿವಕುಮಾರ್

ಚುನಾವಣಾ ಕೆಲಸಗಳಿಂದ ಶಿಕ್ಷಕರನ್ನು ಕೈ ಬಿಡಲು ಸಾಧ್ಯವಿಲ್ಲ. ಅವರು ಮತಗಟ್ಟೆ ಮಟ್ಟದಲ್ಲಿ ಕಾರ್ಯ ನಿರ್ವಹಿಸಲೇಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 

ಈಗಾಗಲೇ ಒಂದಷ್ಟು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರು ನ್ಯಾಯಬದ್ದವಾಗಿ ಕೆಲಸ ಮಾಡುತ್ತಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಿದ್ಧರಾಗಬೇಕು ಎಂದರು.

‘ಸುಮಾರು ₹10 ಸಾವಿರ ಕೋಟಿ ಸಿಎಸ್ಆರ್‌ ನಿಧಿ ಬಳಸಿಕೊಂಡು ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು. ಮಕ್ಕಳು ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುವುದು ತಪ್ಪಬೇಕು. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರನ್ನು ನೇಮಿಸಬೇಕು’ ಎಂದರು.

‘ಬಂಗಾರಪ್ಪ ಅವರ ಕಾಲದಲ್ಲಿ ಗ್ರಾಮೀಣ ಕೃಪಾಂಕ ಪಡೆದು ಹಲವರು ಶಿಕ್ಷಣ ವೃತ್ತಿಗೆ ಸೇರಿದ್ದರು. ರಾಜೀವ್‌ ಗಾಂಧಿ ಅವರು ಆಪರೇಷನ್‌ ಬ್ಲ್ಯಾಕ್‌ ಬೋರ್ಡ್‌ ಯೋಜನೆ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದರು’ ಎಂದು ಸ್ಮರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಟ್ಟಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ದಾಖಲಾತಿ ಶೇ 20 ಹೆಚ್ಚಳದ ಗುರಿ: ಮಧು ಬಂಗಾರಪ್ಪ

‘ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಪ್ರಮುಖ ಗುರಿ. ಈ ಬಾರಿ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಶೇ 20ರಷ್ಟು ಹೆಚ್ಚಿಸಲು ಶಿಕ್ಷಕರು ಪಣತೊಡಬೇಕು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ 14499 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ  ಜಾರಿಗೆ ತರಲಾಗಿದೆ. ಇದು ದೇಶದಲ್ಲೇ ಮಾದರಿ ಯೋಜನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.