ADVERTISEMENT

ರಾಜ್ಯದಲ್ಲಿಯೂ ಹಳೆ ಪಿಂಚಣಿ ವ್ಯವಸ್ಥೆ?: ಪರಿಶೀಲನಾ ಸಮಿತಿ ರಚಿಸಲು ಸರ್ಕಾರದ ಆದೇಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 10:02 IST
Last Updated 1 ಮಾರ್ಚ್ 2023, 10:02 IST
   

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಬದಲಾಗಿ ಹಳೆಯ ಪಿಂಚಣಿ ಯೋಜನೆಗಳ ಜಾರಿ ಸಾಧ್ಯತೆ ಕುರಿತು ಪರಿಶೀಲಿಸಲು ರಾಜ್ಯ ಸರ್ಕಾರ, ಬುಧವಾರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಿ ಆದೇಶಿಸಿದೆ.


ಸರ್ಕಾರಿ ನೌಕರರ ಮುಷ್ಕರದ ಬಿಸಿ, ವಿಧಾನಸಭೆ ಚುನಾವಣೆ ಎದುರಿಗಿರುವ ಬೆನ್ನಲ್ಲೇ ಈ ಮಹತ್ವದ ಆದೇಶ ಸರ್ಕಾರದಿಂದ ಹೊರಬಂದಿದೆ. ಎನ್‌ಪಿಎಸ್ ರದ್ದತಿ ಪರಿಶೀಲಿಸಿ ವರದಿ ಸಲ್ಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


1.04.2006ರ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಎನ್‌ಪಿಎಸ್‌ ಜಾರಿಯಲ್ಲಿರುತ್ತದೆ. ಆದರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಳೆ ಪಿಂಚಣಿ ಯೋಜನೆ ಮರು ಜಾರಿಗೆ 21.02.2023ರಂದು ಮನವಿ ಸಲ್ಲಿಸಿರುತ್ತಾರೆ. ಆ ಮನವಿ ಓದಲಾಗಿದ್ದು, ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಿ, ಈಗಾಗಲೇ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ವರದಿ ನೀಡಬೇಕು ಎಂದು ಆದೇಶದಲ್ಲಿ ಹೇಳಿದೆ.

ADVERTISEMENT


ಈ ಸಮಿತಿ, ಎನ್‌ಪಿಎಸ್‌ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಸಾಧಕ–ಬಾಧಕ ಪರಿಶೀಲಿಸಲಿದೆ. 2 ತಿಂಗಳೊಳಗೆ ಈ ಕುರಿತು ಸರ್ಕಾರಕ್ಕೆ ಅಧ್ಯಯನ ವರದಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.