ADVERTISEMENT

ಹಳೆಯ ವಾಹನ ಬಳಕೆ: ಶುಲ್ಕ ಏರಿಕೆಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 5:20 IST
Last Updated 13 ಮೇ 2022, 5:20 IST
.
.   

ಬೆಂಗಳೂರು: ಹಳೆಯ ವಾಹನಗಳ ಬಳಕೆ ನವೀಕರಣದ ಮೇಲೆ ಹೇರಲಾದ ಹೆಚ್ಚುವರಿ ಶುಲ್ಕ ಮತ್ತು ದಂಡ ವಿಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕೇಂದ್ರದ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಲಾರಿ ಮಾಲೀಕರ ಸಂಘದ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಾರಿಗೆ ಸಚಿವಾಲಯವು ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು’ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ADVERTISEMENT

ಹದಿನೈದು ವರ್ಷಗಳಿಗೂ ಮೀರಿದ ವಾಹನಗಳ ಮೇಲೆ ಹೇರಲಾಗಿದ್ದ ಬಳಕೆ ನವೀಕರಣ ಶುಲ್ಕ ಮತ್ತು ದಂಡವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಕಳೆದ ಏಪ್ರಿಲ್ 1ರಿಂದ ಜಾರಿಗೊಳಿಸಲಾಗಿರುವ ಈ ಆದೇಶದ ಅನುಸಾರ, 15 ವರ್ಷ ಮೀರಿದ ಕಾರುಗಳ ಪರವಾನಗಿ ನವೀಕರಣದ ಶುಲ್ಕವನ್ನು ₹ 600 ರಿಂದ ₹ 5 ಸಾವಿರದವರೆಗೆ ಮತ್ತು ಬೈಕ್‌ಗಳ ಶುಲ್ಕವನ್ನು ₹ 300 ರಿಂದ 1 ಸಾವಿರದವರೆಗೆ ಏರಿಸಲಾಗಿದೆ.15 ವರ್ಷ ಮೀರಿದ ಬಸ್‌ ಮತ್ತು ಟ್ರಕ್‌ಗಳ ಸಾಮರ್ಥ್ಯ ದೃಢೀಕರಣದ ನವೀಕರಣದ ಶುಲ್ಕವನ್ನು ₹ 1,500 ರಿಂದ 12,500ರವರೆಗೆ ಏರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.