ADVERTISEMENT

ಕಿರಿಯರ ಅನ್ನದಲ್ಲೇ ಹಿರಿ ಮಕ್ಕಳಿಗೆ ಪಾಲು: ಶಿಕ್ಷಕರಿಗೆ ಅಕ್ಕಿ ಸಾಗಿಸುವ ಹೊರೆ

ಎಂ.ಜಿ.ಬಾಲಕೃಷ್ಣ
Published 21 ಫೆಬ್ರುವರಿ 2025, 0:38 IST
Last Updated 21 ಫೆಬ್ರುವರಿ 2025, 0:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಸರ್ಕಾರಿ ಪ್ರೌಢಶಾಲೆಗಳ 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿದ್ಧಪಡಿಸಲು 5 ತಿಂಗಳಿನಿಂದ ಸಮರ್ಪಕವಾಗಿ ಪಡಿತರ ಪೂರೈಕೆ ಆಗುತ್ತಿಲ್ಲ. ಇದರ ಪರಿಣಾಮ ಪ್ರಾಥಮಿಕ ಶಾಲೆಗಳಿಗೆ ವಿತರಿಸಲಾಗುವ ಅಕ್ಕಿಯನ್ನು ತರಿಸಿಕೊಂಡು ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ಐದು ತಿಂಗಳಿನಿಂದ ಈ ಪರಿಸ್ಥಿತಿಯಿದೆ.

‘ಪಡಿತರ ಪೂರೈಕೆಯಲ್ಲಿ ಸಮಸ್ಯೆ ಆಗಿದೆ. ಅದಕ್ಕೆ ಸಮೀಪದ ಪ್ರಾಥಮಿಕ ಶಾಲೆ ಅಥವಾ ಗೋದಾಮಿನಿಂದ ಹೊಂದಾಣಿಕೆ ಮಾಡಿಕೊಂಡು, ಅಕ್ಕಿಯನ್ನು ನಮ್ಮ ವಾಹನದಲ್ಲಿ ತಂದು ಬಿಸಿಯೂಟ ತಯಾರಿಸುತ್ತೇವೆ’ ಎಂದು ಶಿಕ್ಷಕರು ತಿಳಿಸಿದರು.

‘1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ, ಎಣ್ಣೆ ಪೂರೈಕೆಯಲ್ಲಿ ಕೊರತೆ ಆಗಿಲ್ಲ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಕಿ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೇ 100ರಷ್ಟು ಹಾಜರಾತಿ ಇರುವುದಿಲ್ಲ. ಅಲ್ಲಿ ಉಳಿಯುವ ಹೆಚ್ಚುವರಿ ಅಕ್ಕಿ ಪ್ರೌಢಶಾಲೆಗೆಳಿಗೆ ವಿತರಿಸಿ, ಹೊಂದಾಣಿಕೆ ಮಾಡುತ್ತಿದ್ದೆವು. ಬಿಸಿಯೂಟಕ್ಕೆ ಸಮಸ್ಯೆ ಆಗಿಲ್ಲ’ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಶೇಖರ್‌ ಹೊರಪೇಟೆ ತಿಳಿಸಿದರು.

ADVERTISEMENT

'ಬಿಸಿಯೂಟ ಅಕ್ಕಿ ಪೂರೈಕೆಯಲ್ಲಿ ಯಾಕೆ ನಿರ್ಲಕ್ಷ್ಯ? ಶಿಕ್ಷಕರು ಬೇರೆಡೆಯಿಂದ ಅಕ್ಕಿ ಮೂಟೆ ಹೊತ್ತು ತರಬೇಕೆ? ನಾನು ನಾಲ್ಕು ತಿಂಗಳಿನಿಂದ ನನ್ನ ಕಾರಿನಲ್ಲೇ ಅಕ್ಕಿಯನ್ನು ಶಾಲೆಗೆ ತರುತ್ತಿದ್ದೇನೆ. ಪೂರೈಕೆ ವ್ಯವಸ್ಥೆ ಸರಿ ಮಾಡಲು ಆಗಲ್ಲವೇ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರೌಢಶಾಲೆ ಶಿಕ್ಷಕರೊಬ್ಬರು ತಿಳಿಸಿದರು.

‘ಜಿಲ್ಲೆಯಲ್ಲಿ ಎಲ್ಲರಿಗೂ ಬಿಸಿಯೂಟ ಸಿಗುತ್ತಿದೆ. ಕೆಲ ಶಾಲೆಗಳಲ್ಲಿ ಶಿಕ್ಷಕರೇ ಹೊಂದಾಣಿಕೆ ಮಾಡಿಕೊಂಡು ಅಕ್ಕಿ ತಂದು, ಬಿಸಿಯೂಟಕ್ಕೆ ತೊಂದರೆ ಆಗದಂತೆ ನೋಡಿಕೊಂಡಿರಬಹುದು. ಅದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಹೇಳಿದರು.

9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಕಿ ಪೂರೈಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಅಕ್ಕಿಯನ್ನು ಶೀಘ್ರ ತರಿಸಿಕೊಂಡು ಪ್ರಾಥಮಿಕ ಶಾಲೆಗಳ ಬಾಕಿ ತೀರಿಸಲಾಗುವುದು.
ಶೇಖರ್ ಹೊರಪೇಟೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ
ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಬಿಸಿಯೂಟಕ್ಕೆ ಸಮಸ್ಯೆ ಆಗಿಲ್ಲ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಕಷ್ಟ ಆಗಿದೆ ಎಂಬ ಬಗ್ಗೆ ಶಿಕ್ಷಕರೂ ನನ್ನ ಬಳಿ ದೂರು ನೀಡಿಲ್ಲ.
ವೆಂಕಟೇಶ ರಾಮಚಂದ್ರಪ್ಪ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ವಿಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.