ADVERTISEMENT

ಕರ್ನಾಟಕದಲ್ಲಿ ಮತ್ತೆ ಐದು ಓಮೈಕ್ರಾನ್‌ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:53 IST
Last Updated 16 ಡಿಸೆಂಬರ್ 2021, 21:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಗುರುವಾರಹೊಸದಾಗಿ ಐದು ಓಮೈಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದ್ದಾರೆ.

ವಿದೇಶದಿಂದ ವಾಪಸ್‌ ಆದ ಮೂವರು ಸೇರಿದಂತೆ ಒಟ್ಟು 5 ಮಂದಿಗೆ ಓಮೈಕ್ರಾನ್‌ ಸೋಂಕು ದೃಢಪಟ್ಟಿದೆ ಎಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್‌ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.

ಇಂಗ್ಲೆಂಡ್‌ನಿಂದ ಹಿಂತಿರುಗಿದ 19 ವರ್ಷದ ಯುವಕನಿಗೆ, ನೈಜೀರಿಯಾದಿಂದ ವಾಪಸ್‌ ಆದ 52 ವರ್ಷದ ವ್ಯಕ್ತಿಗೆ ಹಾಗೂ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ 33 ವರ್ಷದ ವ್ಯಕ್ತಿಗೆ ಓಮೈಕ್ರಾನ್‌ ತಗುಲಿದೆ.ದೆಹಲಿಯಿಂದ ಹಿಂತಿರುಗಿದ 36 ವರ್ಷದ ಪುರುಷ ಹಾಗೂ 76 ವರ್ಷದ ಮಹಿಳೆಗೆ ಓಮೈಕ್ರಾನ್‌ ದೃಢ ಪಟ್ಟಿದೆ ಎಂದು ಸುಧಾಕರ್‌ ಮಾಹಿತಿ ನೀಡಿದ್ದಾರೆ.

ADVERTISEMENT

12 ನೇರ, 27 ಪರೋಕ್ಷ ಸಂಪರ್ಕಿತರು
ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್ ಸೋಂಕು ದೃಢಪಟ್ಟಿರುವ ‌ಐದು ಮಂದಿಗೆ ಒಟ್ಟು 12 ನೇರ ಸಂಪರ್ಕಿತರು ಮತ್ತು 27 ಪರೋಕ್ಷ ಸಂಪರ್ಕಿತರಿದ್ದಾರೆ.

ಬ್ರಿಟನ್‌ನಿಂದ ಕೋವಿಡ್ ನೆಗೆಟಿವ್ ವರದಿ ಪಡೆದು ಡಿ.13ರಂದು ನಗರಕ್ಕೆ ಬಂದಿದ್ದ 19 ವರ್ಷದ ಯುವತಿಯನ್ನು(ರೋಗಿ ಸಂಖ್ಯೆ–4) ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಕೂಡಲೇ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರ ಮನವಿಯಂತೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಇವರಿಗೆ ನೇರ ಅಥವಾ ಪರೋಕ್ಷ ಸಂಪರ್ಕಿತರಿಲ್ಲ.

ನೈಜಿರಿಯಾದಿಂದ ಡಿ.13ರಂದು ನೆಗೆಟಿವ್ ವರದಿ ಜೊತೆ ಬಂದಿದ್ದ 52 ವರ್ಷದ ವ್ಯಕ್ತಿಯನ್ನು(ರೋಗಿ ಸಂಖ್ಯೆ–5) ಕೆಐಎ ವಿಮಾನ ನಿಲ್ದಾಣದಲ್ಲಿ ಪರೀಕ್ದೆಗೆ ಒಳಪಡಿಸಲಾಗಿದೆ. ಅಲ್ಲಿಂದ ಬೆಳಗಾವಿಗೆ ಬೇರೆ ವಿಮಾನದಲ್ಲಿ ಅವರು ಪ್ರಯಾಣ ಬೆಳಸಿದರು. ಮರುದಿನ ಅವರಿಗೆ ಕೋವಿಡ್ ದೃಢಪಟ್ಟಿರುವ ವರದಿ ದೊರೆಯಿತು. ಕೂಡಲೇ ಅವರನ್ನು ಪ್ರತ್ಯೇಕ ಮನೆಯಲ್ಲಿ ಇರಿಸಲಾಯಿತು. ಬಳಿಕ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇವರಿಗೆ ಇಬ್ಬರು ನೇರ ಸಂಪರ್ಕಿರಿದ್ದು, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ನವದೆಹಲಿಯಲ್ಲಿ ಮದುವೆ ಮುಗಿಸಿಕೊಂಡು ಡಿ.3ರಂದು ಬಂದಿದ್ದ 70 ವರ್ಷದ ಮಹಿಳೆ (ರೋಗಿ ಸಂಖ್ಯೆ–6) ಮತ್ತು 36 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ–7) ಮಹದೇವಪುರದ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದರು. ದೆಹಲಿಯಲ್ಲಿ ಓಮೈಕ್ರಾನ್ ಸೋಂಕಿತರಿಗೆ ಇವರು ನೇರ ಸಂಪರ್ಕಿತರಾಗಿದ್ದರು. ಮೂವರು ಪ್ರಾಥಮಿಕ(ಇಬ್ಬರು ಪಾಸಿಟಿವ್) ಮತ್ತು ಇಬ್ಬರು ಪರೋಕ್ಷ ಸಂಪರ್ಕಿತರಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಡಿ.8ರಂದು ದೆಹಲಿಗೆ ಬಂದು ಅಲ್ಲಿಂದ ಅದೇ ದಿನ ಬೆಂಗಳೂರಿಗೆ ಬಂದಿದ್ದ 33 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ–8) ದೆಹಲಿಯಲ್ಲೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ನೆಗೆಟಿವ್ ವರದಿ ಹಿಡಿದು ಬಂದಿದ್ದರು. ಡಿ.10ರಂದು ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಂಡರು. ಡಿ.11ರಂದು ಪಾಸಿಟಿವ್ ವರದಿ ಬಂದಿದ್ದರಿಂದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ನಾಲ್ವರು ನೇರ ಸಂಪರ್ಕಿತರು ಮತ್ತು 25 ಮಂದಿ ಪರೋಕ್ಷ ಸಂಪರ್ಕಿತರನ್ನು ಅವರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.