ADVERTISEMENT

ಓಮೈಕ್ರಾನ್‌: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಇಂದು

ಕೋವಿಡ್ ನಿಯಂತ್ರಣಕ್ಕೆ ಅಣಿ: 17 ಸದಸ್ಯರಿರುವ ತಜ್ಞರ ಹೊಸ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 19:33 IST
Last Updated 7 ಡಿಸೆಂಬರ್ 2021, 19:33 IST
ಓಮೈಕ್ರಾನ್‌
ಓಮೈಕ್ರಾನ್‌   

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ತಜ್ಞರ ಸಮಿತಿಯನ್ನು ಹೊಸದಾಗಿ ರಚಿಸಿರುವ ರಾಜ್ಯ ಸರ್ಕಾರ, ಮತ್ತಷ್ಟು ಬಿಗಿ
ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬುಧವಾರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಬಳಿಕ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.

ಕಂದಾಯ ಸಚಿವ ಆರ್‌. ಅಶೋಕ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಪಿ. ರವಿಕುಮಾರ್‌, ಹೆಚ್ಚು ವರಿ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಹಣಕಾಸು, ನಗರಾಭಿವೃದ್ಧಿ ಇಲಾಖೆಗಳು ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನ ಪರಿಷತ್‌ನ 25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಗಳಲ್ಲಿ ಬದಲಾವಣೆ ಮಾಡಿರಲಿಲ್ಲ. ಆದರೆ, ಓಮೈಕ್ರಾನ್‌ ತಳಿಯ ಕೊರೊನಾ ವೈರಾಣು ಸೋಂಕು ರಾಜ್ಯದಲ್ಲಿ ಪತ್ತೆಯಾಗಿರುವುದು ಮತ್ತು ಕೆಲವು ಶಾಲೆ, ಕಾಲೇಜುಗಳಲ್ಲಿ ಗುಂಪಾಗಿ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ರಾಜ್ಯ ಸರ್ಕಾರವನ್ನು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಕೈಮೀರದಂತೆ ತಡೆಯಲು ಬಿಗಿಯಾದ ಕ್ರಮಗಳಿರುವ ಹೊಸ ಮಾರ್ಗಸೂಚಿಯನ್ನು ಉನ್ನತ ಮಟ್ಟದ ಸಭೆಯ ಬಳಿಕ ಪ್ರಕಟಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

17 ಸದಸ್ಯರ ಸಮಿತಿ: ಕೋವಿಡ್ ನಿಯಂ ತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂ ಸಿಆರ್‌ಐ) ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ. ರವಿ ಅಧ್ಯಕ್ಷತೆಯಲ್ಲಿ 17 ಮಂದಿ ಒಳಗೊಂಡ ಸಮಿತಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ರಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಸೂಚನೆ, ಆದೇಶಗಳನ್ನು ಸಮಿತಿ ಕಾರ್ಯಗತಗೊಳಿಸಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಲು ಕ್ರಮವಹಿಸಬೇಕು. ಆಸ್ಪತ್ರೆಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿ, ಕೋವಿಡ್ ಪೀಡಿತರಿಗೆ ಹಾಸಿಗೆಗಳನ್ನು ವ್ಯವಸ್ಥೆ ಮಾಡಬೇಕುಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ. ಗಿರೀಶ್ ಸಮಿ ತಿಯ ಸದಸ್ಯ ಕಾರ್ಯದರ್ಶಿಯಾಗಿದ್ದು, ಖಾಸಗಿ ಆಸ್ಪತ್ರೆಗಳ ವೈದ್ಯರು ಸೇರಿದಂತೆ 15 ಮಂದಿ ಸದಸ್ಯರು ಸಮಿತಿಯಲ್ಲಿ ಇದ್ದಾರೆ.

ಸಮಿತಿ ಸದಸ್ಯರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್, ಫೋರ್ಟಿಸ್ ಆಸ್ಪತ್ರೆಯ ಡಾ.ಕೆ.ಎನ್. ರಮೇಶ್, ಸೇಂಟ್‌ ಜಾನ್ಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಾರ್ಜ್‌ ಡಿಸೋಜ, ವಿಕ್ರಮ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಕೆ.ಎಸ್. ಸತೀಶ್, ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ, ನಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಬದ್ರಿನಾರಾಯಣ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ. ಶಶಿಭೂಷಣ್ ಬಿ.ಎಲ್., ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್ ರಂಗಪ್ಪ, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಸ್. ಚಂದ್ರಮೌಳಿ, ಅಪೋಲೊ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ರವೀಂದ್ರ ಮೆಹ್ತಾ, ಮಣಿಪಾಲ್ ಆಸ್ಪತ್ರೆಯ ಡಾ. ಸುನೀಲ್ ಕಾರಂತ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಡಾ. ಬಸವರಾಜ್, ಬಿಎಂಸಿಆರ್‌ಐ ವೈದ್ಯೆ ಡಾ. ಸವಿತಾ ಹಾಗೂ ಮಣಿಪಾಲ್ ಆಸ್ಪತ್ರೆಯ ಡಾ. ಸಂಪತ್ ಸದಸ್ಯರಾಗಿದ್ದಾರೆ.

ಕೋವಿಡ್‌ ಪರೀಕ್ಷೆಗೆ ಪರಿಷ್ಕೃತ ದರ

ಓಮೈಕ್ರಾನ್‌ ಪತ್ತೆಯಾದ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಪರೀಕ್ಷೆ ಗಳನ್ನು ಹೆಚ್ಚಿಸಲಾಗಿದ್ದು, ಅಲ್ಲಿ ನಡೆಸಲಾಗುವ ವಿವಿಧ ಮಾದರಿಗಳ ಪರೀಕ್ಷಾ ದರವನ್ನು ಪರಿಷ್ಕರಿಸಲಾಗಿದೆ.

ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ₹500, ಡಿಜಿಟಲ್ ಮಾದರಿಯಲ್ಲಿ ಪರೀಕ್ಷೆ ನಡೆಸಿ ಕೇವಲ 15 ನಿಮಿಷದಲ್ಲಿ ಆರ್‌ಟಿ–ಪಿಸಿಆರ್‌ ವರದಿ ನೀಡುವ ‘ಅಬಾಟ್‌ ಐಡಿ’ಗೆ ₹3,000, ಥರ್ಮೊ ಫಿಷರ್‌ ಅಕ್ಯುಲಾ ₹1,500, ಟಾಟಾ ಎಂಡಿಎಕ್ಸ್‌ಎಫ್‌ಗೆ ₹1,200 ಹಾಗೂ ಸೆಫೀಡ್‌ ಜೀನ್‌ ಎಕ್ಸ್‌ಪರ್ಟ್‌ ಪರೀಕ್ಷೆಗೆ ₹2,750 ದರ ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

‘ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.