ADVERTISEMENT

ಓಮೈಕ್ರಾನ್ ಸೋಂಕಿತರಿಗೆ 10 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 21:21 IST
Last Updated 8 ಡಿಸೆಂಬರ್ 2021, 21:21 IST
   

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ದೃಢಪಟ್ಟವರನ್ನು 10 ದಿನ ಆಸ್ಪತ್ರೆಗಳಲ್ಲಿಯೇ ಪ್ರತ್ಯೇಕಿಸಿ, ಚಿಕಿತ್ಸೆ ಒದಗಿಸಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸರ್ಕಾರ ರಚಿಸಿದ್ದಕ್ಲಿನಿಕಲ್ ತಜ್ಞರ ಸಮಿತಿಯು ಬುಧವಾರ ಮೊದಲ ಸಭೆ ನಡೆಸಿತು. ದಕ್ಷಿಣ ಆಫ್ರಿಕಾದಲ್ಲಿನ ಪರಿಸ್ಥಿತಿ ಹಾಗೂ ಅಲ್ಲಿ ಚಿಕಿತ್ಸೆಗೆ ಅನುಸರಿಸಿರುವ ಕ್ರಮಗಳ ಬಗ್ಗೆ ತಜ್ಞರು ವಿಶ್ಲೇಷಿಸಿದರು. ಈ ಮಾದರಿಯ ವೈರಾಣು ಹೊಂದಿದವರ ಸಂಖ್ಯೆ ಹೆಚ್ಚಳವಾದಲ್ಲಿ ಪರಿಸ್ಥಿತಿ ಎದುರಿಸಲು ಹಾಸಿಗೆಗಳ ವ್ಯವಸ್ಥೆ ಮಾಡುವ ಕುರಿತೂ ಚರ್ಚಿಸಲಾಯಿತು.

ಓಮೈಕ್ರಾನ್ ದೃಢಪಟ್ಟಿದ್ದ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಮೊದಲು ಎರಡು ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟ ಬಳಿಕವಷ್ಟೇ ಅವರನ್ನು ಮನೆಗೆ ಕಳುಹಿಸಬೇಕು ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದರು.‌

ADVERTISEMENT

‘ಓಮೈಕ್ರಾನ್ ತೀವ್ರತೆ ಕಡಿಮೆ ಇದ್ದರೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ, 10 ದಿನಗಳು ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಸಕ್ಕೆ ಒಳಪಡಬೇಕು. ಮನೆಗೆ ತೆರಳುವ 24 ಗಂಟೆಗಳ ಮೊದಲು ಎರಡು ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿ, ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟ ಬಳಿಕ ಮನೆಗೆ ಕಳುಹಿಸಬೇಕು’ ಎಂದುಸಮಿತಿಯಲ್ಲಿನ ತಜ್ಞರೊಬ್ಬರು ತಿಳಿಸಿದರು.

‘ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳಿಗೂ ಈ ತಳಿಯ ಸೋಂಕು ಹರಡಿದೆ. ಹೀಗಾಗಿ, ಮನೆ ಆರೈಕೆಗೆ ಅವಕಾಶ ನೀಡಬಾರದು. ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.