ADVERTISEMENT

ಚಾರ್ಮಾಡಿ ಘಾಟಿ: ಒಂದು ತಿಂಗಳು ಬಂದ್‌

ಭಾರಿ ಭೂಕುಸಿತದಿಂದ ಹೆದ್ದಾರಿಗೆ ಹಾನಿ l ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
   

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಆದರೆ ಮುಂದಿನ ಎರಡು– ಮೂರು ದಿನ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಸಂಚಾರ ಬಂದ್‌: ಭಾರಿ ಭೂಕುಸಿತದಿಂದ ತೀವ್ರವಾಗಿ ಹಾನಿಗೀಡಾಗಿರುವ ಚಾರ್ಮಾಡಿ ಘಾಟಿ (ರಾಷ್ಟ್ರೀಯ ಹೆದ್ದಾರಿ 73) ಮಾರ್ಗದಲ್ಲಿ ಸೆಪ್ಟೆಂಬರ್‌ 14ರವರೆಗೆ ವಾಹನ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಬುಧವಾರ ಆದೇಶ ಹೊರಡಿಸಿದ್ದಾರೆ.

60ಕ್ಕೂ ಹೆಚ್ಚು ಸ್ಥಳಗಳಲ್ಲಿ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಕೆಲವೆಡೆ ರಸ್ತೆಯ ಭಾಗವೇ ಜಾರಿ ಪ್ರಪಾತಕ್ಕೆ ಬಿದ್ದಿದೆ. 40 ಮೀಟರ್‌ನಿಂದ 60 ಮೀಟರ್‌ ಆಳದ ಕಂದಕಗಳು ಸೃಷ್ಟಿಯಾಗಿವೆ. ರಸ್ತೆಯ ದುರಸ್ತಿ ಕಾಮಗಾರಿಗೆ ಅಡ್ಡಿಯಾಗದಂತೆ ತಡೆಯುವ ಉದ್ದೇಶದಿಂದ ವಾಹನ ಸಂಚಾರ ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ವಿಭಾಗದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಆಗಸ್ಟ್‌ 7ರಂದು ಭೂಕುಸಿತದಿಂದ ಈ ಮಾರ್ಗ ಬಂದ್‌ ಆಗಿತ್ತು.

ADVERTISEMENT

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಮತ್ತೆ ಮಳೆ ಚುರುಕಾಗಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಮಡಿಕೇರಿ ಸುತ್ತಮುತ್ತಲೂ ರಭಸವಾಗಿ ಸುರಿಯುತ್ತಿದ್ದು, ದಕ್ಷಿಣ ಕೊಡಗಿನಲ್ಲೂ ಮಳೆಯಾಗಿದೆ.

ಕಳೆದ ವಾರ ಸುರಿದಿದ್ದ ಮಳೆ ಪ್ರವಾಹವನ್ನೇ ಸೃಷ್ಟಿಸಿತ್ತು. ಜಿಲ್ಲೆಯ ಜನರಲ್ಲಿ ಈಗ ಮತ್ತೆ ಆತಂಕ ಹೆಚ್ಚಿದೆ.

ಸಾಧಾರಣ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಭಾಗದಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ: ಜಿಲ್ಲೆಯೆಲ್ಲೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಶಿವಮೊಗ್ಗದಲ್ಲಿ ಬೆಳಿಗ್ಗೆ ಕೆಲಕಾಲ ಜೋರು ಮಳೆಯಾಗಿದ್ದು, ನಂತರ ತುಂತುರು ಮಳೆಯಾಗಿದೆ. ತೀರ್ಥಹಳ್ಳಿ, ಹೊಸನಗರ, ರಿಪ್ಪನ್‌ಪೇಟೆ, ಮಾಸ್ತಿಕಟ್ಟೆ, ಕೋಣಂದೂರು, ಸಾಗರ, ಸೊರಬ, ಶಿಕಾರಿಪುರ, ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 78.40 ಮಿ.ಮೀ. ಮಳೆಯಾಗಿದ್ದು, ಸರಾಸರಿ 11.20 ಮಿ.ಮೀ. ಮಳೆ ದಾಖಲಾಗಿದೆ.ಶಿವಮೊಗ್ಗ 9.40 ಮಿ.ಮೀ., ಭದ್ರಾವತಿ 1.60 ಮಿ.ಮೀ., ತೀರ್ಥಹಳ್ಳಿ 16.40 ಮಿ.ಮೀ., ಸಾಗರ 14.00 ಮಿ.ಮೀ., ಶಿಕಾರಿಪುರ 2.00 ಮಿ.ಮೀ., ಸೊರಬ 7.20 ಮಿ.ಮೀ. ಹಾಗೂ ಹೊಸನಗರ 27.80 ಮಿ.ಮೀ. ಮಳೆಯಾಗಿದೆ.

ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 28,300 ಕ್ಯುಸೆಕ್, ಭದ್ರಾ ಜಲಾಶಯಕ್ಕೆ 14,220 ಕ್ಯುಸೆಕ್‌ ಹಾಗೂ ತುಂಗಾ ಜಲಾಶಯಕ್ಕೆ 21,326 ಕ್ಯುಸೆಕ್‌ ನೀರಿನ ಒಳಹರಿವಿದೆ.

ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.

ತಗ್ಗಿದ ಮಳೆ: ಬೆಳಗಾವಿ ಜಿಲ್ಲೆಯಾದ್ಯಂತ ಬುಧವಾರ ಮಳೆ ಸಂಪೂರ್ಣವಾಗಿ ತಗ್ಗಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆ ಕಡಿಮೆಯಾಗಿದ್ದು, ಅಲ್ಲಿಂದ ಕೃಷ್ಣಾ ನದಿಗೆ ಹರಿದುಬರುತ್ತಿದ್ದ ನೀರಿನ ಪ್ರಮಾಣವು ಇಳಿಮುಖವಾಗಿದೆ. ನದಿ ಪ್ರವಾಹ ನಿನ್ನೆಗಿಂತ 1ರಿಂದ 2 ಅಡಿಗಳವರೆಗೆ ಕಡಿಮೆಯಾಗಿದೆ.

ಮಲಪ್ರಭಾ ಜಲಾಶಯಕ್ಕೆ 7,042 ಕ್ಯುಸೆಕ್‌ ನೀರು ಹರಿದುಬಂದಿದ್ದು, 2,014 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಘಟಪ್ರಭಾ ಜಲಾಶಯಕ್ಕೆ 21,951 ಕ್ಯುಸೆಕ್ ನೀರು ಹರಿದುಬಂದಿದ್ದು, ಇಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ.

ಚಿಕ್ಕೋಡಿಯ ಕಲ್ಲೋಳ ಬಳಿ ಮಹಾರಾಷ್ಟ್ರದಿಂದ ಹರಿದುಬಂದ 2.88 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ.

ಗೋಡೆ ಬಿದ್ದು ತಾಯಿ, ಮಗು ಸಾವು

ಚನ್ನಗಿರಿ: ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಮಂಗಳವಾರ ಮನೆಯ ಗೋಡೆ ಕುಸಿದು ಬಿದ್ದು ತಾಯಿ, ಒಂದು ವರ್ಷದ ಮಗು ಇಬ್ಬರೂ ಮೃತಪಟ್ಟಿದ್ದಾರೆ.

ಉಮಾ ಕುಮಾರ್ (30) ಹಾಗೂ ಧನುಷ್ (1) ಗೋಡೆ ಬಿದ್ದು ಮೃತಪಟ್ಟವರು.

ಗಂಡ ಕುಮಾರ್ ಕಾರ್ಯನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಮಂಗಳವಾರ ರಾತ್ರಿ ಮನೆಯಲ್ಲಿ ತಾಯಿ ಹಾಗೂ ಮಗು ಇಬ್ಬರೇ ಮಲಗಿಕೊಂಡಿದ್ದರು. ರಾತ್ರಿ 11ಕ್ಕೆ ಗೋಡೆ ಕುಸಿದುಬಿದ್ದಿದೆ. ಕೂಡಲೇ ಅಕ್ಕಪಕ್ಕದವರು ಬಂದು ಗಂಭೀರವಾಗಿ ಗಾಯಗೊಂಡ ತಾಯಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎನ್.ಜೆ. ನಾಗರಾಜ್ ಭೇಟಿ ನೀಡಿ, ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ₹ 8 ಲಕ್ಷ ಪರಿಹಾರ ನೀಡಬೇಕೆಂದು ಶಾಸಕರು ತಿಳಿಸಿದ್ದಾರೆ. ಶೀಘ್ರವೇ ಪರಿಹಾರಧನದ ಚೆಕ್ ಅನ್ನು ಶಾಸಕರು ವಿತರಿಸಲಿದ್ದಾರೆ ಎಂದು ತಿಳಿಸಿದರು.

ಮಣ್ಣು ಪಾಲಾಗಿದ್ದ ವ್ಯಕ್ತಿ ಶವ ಪತ್ತೆ

ಚಿಕ್ಕಮಗಳೂರು: ಸೇನಾ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದ ಕ್ಯಾನ್ಸರ್‌ ರೋಗಿ, ಹಲಗಡಕ ಗ್ರಾಮದ ಕಿಟ್ಟು ಪೂಜಾರಿ (55) ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಮರಸಣಿಗೆಯಲ್ಲಿ ಆರು ದಿನಗಳ ಹಿಂದೆ ಗುಡ್ಡ ಕುಸಿದು ಮಣ್ಣುಪಾಲಾಗಿದ್ದ ಸಂತೋಷ್‌ (45) ಮೃತದೇಹ ಬುಧವಾರ ಪತ್ತೆಯಾಗಿದೆ.

ಗುಡ್ಡದಮಣ್ಣು ಕುಸಿದು ಸಂಚಾರ ಕಡಿತವಾಗಿ ಮೂಡಿಗೆರೆ ತಾಲ್ಲೂಕಿನ ಹಲಗಡಕದಲ್ಲಿ ಮನೆಯಲ್ಲಿ ಸಿಲುಕಿಕೊಂಡಿದ್ದ ಕಿಟ್ಟು ಪೂಜಾರಿ ಅವರನ್ನು ಸೇನಾ ತಂಡದವರು ಇದೇ 12ರಂದು ಎಂಟು ಕಿಲೋ ಮೀಟರ್‌ ಸ್ಟ್ರೆಚರ್‌ನಲ್ಲಿ ಹೊತ್ತು ತಂದು ರಕ್ಷಣೆ ಮಾಡಿದ್ದರು. ಸೋಮವಾರ ರಾತ್ರಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ 9ರಂದು ಗುಡ್ಡ ಕುಸಿದು ಮರಸಣಿಗೆಯಲ್ಲಿ ಸಂತೋಷ್‌ ಮಣ್ಣುಪಾಲಾಗಿದ್ದರು. ಶೋಧ ಕಾರ್ಯಾಚರಣೆ ಮಾಡಿ ಶವವನ್ನು ಹೊರ ತೆಗೆಯಲಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದಾಗಿ 10 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮಧುಗುಂಡಿಯಲ್ಲಿ ಗುಡ್ಡ ಕುಸಿದು ಮಣ್ಣುಪಾಲಾಗಿರುವ ನಾಗಪ್ಪಗೌಡ (82) ಶೋಧ ಮುಂದುವರಿದಿದೆ.

ಮತ್ತೊಂದು ಮೃತದೇಹ ಪತ್ತೆ

ಕೊಡಗು ಜಿಲ್ಲೆ ವಿರಾಜಪೇಟೆಯ ತೋರ ಗ್ರಾಮದಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ, ಬುಧವಾರ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದಿಂದ ಸತ್ತವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಇನ್ನೂ 6 ಮಂದಿ ಕಣ್ಮರೆಯಾಗಿದ್ದು, ಎನ್‌ಡಿಆರ್‌ಎಫ್‌ ಹಾಗೂ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಕಳೆದ ಆರು ದಿನಗಳಿಂದ ಈ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.