ADVERTISEMENT

ಕೋವಿಡ್‌: ದೇಶದಲ್ಲೇ ಮೊದಲ ಸಾವು, ವರ್ಷವಾದರೂ ಕೈ ಸೇರಿಲ್ಲ ಪಾಸಿಟಿವ್‌ ವರದಿ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
ಮೊಹಮದ್‌ ಹುಸೇನ್‌ ಸಿದ್ದಿಕಿ
ಮೊಹಮದ್‌ ಹುಸೇನ್‌ ಸಿದ್ದಿಕಿ   

ಕಲಬುರ್ಗಿ: ಕೋವಿಡ್‌ನಿಂದ ದೇಶದಲ್ಲೇ ಮೊದಲು ಮೃತಪಟ್ಟ ಇಲ್ಲಿನ ಮೊಹಮದ್‌ ಹುಸೇನ್‌ ಸಿದ್ದಿಕಿ (76) ಅವರ ಕೋವಿಡ್‌ ಪಾಸಿಟಿವ್‌ ವರದಿ ಇನ್ನೂ ಅವರ ಕುಟುಂಬದ ಕೈ ಸೇರಿಲ್ಲ!

ಸೌದಿ ಅರೇಬಿಯಾದ ಮೆಕ್ಕಾ ಯಾತ್ರೆಗೆ ತೆರಳಿದ್ದ ಅವರು 2020ರ ಫೆಬ್ರುವರಿ 29ರಂದು ಕಲಬುರ್ಗಿಗೆ ಮರಳಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಮಾರ್ಚ್‌ 9ರಂದು ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಕಲಬುರ್ಗಿಗೆ ಕರೆತರುವಾಗ ಮಾರ್ಗ ಮಧ್ಯೆ ಮಾರ್ಚ್‌ 10ರಂದು ಮೃತಪಟ್ಟರು. ಅವರಿಗೆ ಕೋವಿಡ್‌–19 ತಗುಲಿದ್ದು ದೃಢಪಟ್ಟಿದ್ದರಿಂದ ದೇಶದ ಗಮನ ಕಲಬುರ್ಗಿಯತ್ತ ಹರಿದಿತ್ತು.

ವರ್ಷದ ಹಿಂದಿನ ಕಹಿ ನೆನಪುಗಳನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಮೊಹಮದ್‌ ಹುಸೇನ್‌ ಸಿದ್ದಿಕಿ ಅವರ ಪುತ್ರ ಹೈಮದ್‌ ಫೈಜಲ್‌, ‘ತಂದೆಗೆ ಕೊರೊನಾ ತಗುಲಿದ್ದು ನಿಜವೇ ಇರಬಹುದು. ಅವರ ಸಾವು ಕೋವಿಡ್‌ನಿಂದ ಸಂಭವಿಸಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟರು ಎಂಬುದು ನನ್ನ ನಂಬಿಕೆ. ಈ ಬಗ್ಗೆ ನಿಖರ ವರದಿ ನೀಡಿ ಎಂದು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಇದೂವರೆಗೂ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ತಂದೆ ತೀರಿಕೊಂಡ ಬಳಿಕ ಆರು ತಿಂಗಳವರೆಗೆ ನಮ್ಮ ಕುಟುಂಬ ಬಹಳ ಸಂಕಷ್ಟ ಎದುರಿಸಬೇಕಾಯಿತು. ಸ್ನೇಹಿತರು, ಬಂಧುಗಳು, ‍ಪರಿಚಯದವರೂ ದೂರವಾದರು. ದಿನಸಿ ಅಂಗಡಿಯವರು ಕೂಡ ಸಾಮಗ್ರಿ ಕೊಡಲಿಲ್ಲ. ನಮ್ಮನ್ನು ನೋಡಿದರೆ ಸಾಕು; ಬಾಗಿಲು ಹಾಕಿಕೊಳ್ಳುತ್ತಿದ್ದರು. ಆದರೂ ಎಲ್ಲವನ್ನೂ ಸಹಿಸಿಕೊಂಡೆವು. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದೆವು. ಮಕ್ಕಳು, ಮಹಿಳೆಯರು, ಪುರುಷರು ಮೂರು ತಿಂಗಳು ಮನೆಯಲ್ಲೇ ಬಂದಿಯಾದೆವು’ ಎಂದು ನೊಂದು ನುಡಿದರು.

ಅರ್ಜಿ ಕೊಡಲಿ: ‘ಕೋವಿಡ್‌ನಿಂದ ಸಾವು ಸಂಭವಿಸಿದ ವೇಳೆಯೇ ಕುಟುಂಬದವರಿಗೆ ಅದರ ವರದಿ ನೀಡಲಾಗಿರುತ್ತದೆ. ಸಿದ್ದಿಕಿ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಕೋವಿಡ್ ವರದಿ ಮಾರನೇ ದಿನ ಬಂದಿದೆ. ಹಾಗಾಗಿ, ಅವರಿಗೆ ವರದಿ ಸಿಕ್ಕಿರಲಿಕ್ಕಿಲ್ಲ. ಸಿದ್ದಿಕಿ ಅವರ ಎಸ್‌ಆರ್‌ಎಫ್‌ ಸಂಖ್ಯೆ ಸಮೇತ ಅರ್ಜಿ ಕೊಟ್ಟರೆ ಲಿಖಿತ ವರದಿ ನೀಡುತ್ತೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.