ADVERTISEMENT

ಕೆ.ಜಿ ಈರುಳ್ಳಿ ದರ ಕನಿಷ್ಠ ₹100 ಇರಬೇಕು: ಕೃಷಿ ತಜ್ಞ ಡಾ.ಪ್ರಕಾಶ ಕಮ್ಮರಡಿ

ಕೃಷಿ ತಜ್ಞ ಡಾ.ಪ್ರಕಾಶ ಕಮ್ಮರಡಿ ಅಭಿಮತ *ಆರ್‌ಸಿಇಪಿ ಒಪ್ಪಂದ ತಿರಸ್ಕಾರ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 13:43 IST
Last Updated 7 ಡಿಸೆಂಬರ್ 2019, 13:43 IST
ವಿಚಾರ ಸಂಕಿರಣದಲ್ಲಿ (ಎಡದಿಂದ) ಜೈನ ಮೆಹ್ತಾ, ಎಚ್.ಎನ್ ನಾಗಮೋಹನ್ ದಾಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಆರ್ಥಿಕ ಚಿಂತಕ ದೇವೇಂದ್ರ ಶರ್ಮ ಮಾತುಕತೆಯಲ್ಲಿ ತೊಡಗಿದ್ದರು -ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ (ಎಡದಿಂದ) ಜೈನ ಮೆಹ್ತಾ, ಎಚ್.ಎನ್ ನಾಗಮೋಹನ್ ದಾಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಆರ್ಥಿಕ ಚಿಂತಕ ದೇವೇಂದ್ರ ಶರ್ಮ ಮಾತುಕತೆಯಲ್ಲಿ ತೊಡಗಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೃಷಿ ಬೆಲೆ ಆಯೋಗದ ಅಧ್ಯಕ್ಷನಾಗಿದ್ದಾಗ ಕೆ.ಜಿ. ಈರುಳ್ಳಿಗೆ ಕನಿಷ್ಠ ₹ 100 ನಿಗದಿಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಈರುಳ್ಳಿಗೆ ಇದೀಗ ಸೂಕ್ತ ದರ ಸಿಗುತ್ತಿದೆ’ ಎಂದು ಕೃಷಿ ತಜ್ಞಡಾ.ಪ್ರಕಾಶ ಕಮ್ಮರಡಿ ತಿಳಿಸಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ವಿಷಯದ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಈರುಳ್ಳಿ ದರ ನೆಲಕಚ್ಚಿದಾಗ ಯಾರೂ ಬೆಳೆದ ರೈತರ ಬಗ್ಗೆ ಧ್ವನಿಯೆತ್ತುವುದಿಲ್ಲ. ಅದೇ ಅದರ ಬೆಲೆ ಏರಿದಾಗ ಕೇಂದ್ರ ಸರ್ಕಾರ ಕೂಡ ಕಿವಿಗೊಡುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಪ್ರತಿ ಮನೆಯಲ್ಲಿ ವಾರಕ್ಕೆ ಸರಾಸರಿ 2ಕೆ.ಜಿ. ಈರುಳ್ಳಿ ಮಾತ್ರ ಬಳಸಲಾಗುತ್ತದೆ. ಹಾಗಾಗಿ ಈರುಳ್ಳಿ ದುಬಾರಿಯಾಗಿದೆ ಎಂದು ಬಿಂಬಿಸುವುದು ಸರಿಯಲ್ಲ. ಬಹುಮಹಡಿಯ ಮಾಲ್‌ಗಳಲ್ಲಿ ಟೀ, ಕಾಫಿಗಳಿಗೆ ₹ 50– ₹100 ಪಡೆದರೆ ಯಾರೂ ಪ್ರಶ್ನಿಸುವುದಿಲ್ಲ’ ಎಂದರು.

ADVERTISEMENT

‘ನಮ್ಮ ಆಮದು, ರಫ್ತು ನೀತಿಗಳಲ್ಲೂ ದೋಷಗಳಿವೆ. ಕಳೆದ ವರ್ಷ ಈರುಳ್ಳಿ, ತೊಗರಿ ಬೆಲೆ ದಿಢೀರ್ ಇಳಿಕೆಯಾದಾಗ ರೈತರು ಕಂಗಾಲಾಗಿದ್ದರು. ಇದೇ ವೇಳೆ ನಮ್ಮ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕೆಲ ದೇಶಗಳು ನಮಗೆ ತೊಗರಿ ರಫ್ತು ಮಾಡಿದವು. ಅದೇ ರೀತಿ,ಕೆ.ಜಿ. ಅಡಿಕೆ ಬೆಳೆಯಲು ಸರಾಸರಿ ₹200 ವೆಚ್ಚವಾಗಲಿದೆ. ಆದರೆ, ಒಂದು ಕೆ.ಜಿ.ಗೆ ಕೇವಲ ₹11ಕ್ಕೆ ಅಡಿಕೆ ಆಮದಾಯಿತು. ಕಳಪೆ ಅಡಿಕೆಯಿಂದ ನಮ್ಮಲ್ಲಿನ ಅಡಿಕೆ ಬೆಳೆಗಾರರೂ ಸಮಸ್ಯೆ ಎದುರಿಸುವಂತಾಯಿತು’ ಎಂದು ವಿವರಿಸಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್ ದಾಸ್, ‘ಪ್ರತಿಯೊಂದಕ್ಕೂ ವಿದೇಶಿ ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಲೂಗಡ್ಡೆ ಚಿಪ್ಸ್‌,ಬಿಸ್ಕತ್ತು,ಚಾಕಲೇಟ್‌ಗಳ ತಯಾರಿಗೂ ವಿದೇಶಿ ತಂತ್ರಜ್ಞಾನ ಬಳಸುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದರು.

‘ಕಳೆನಾಶಕ, ಕೀಟನಾಶಕಗಳ ಅತಿಬಳಕೆಯ ಪರಿಣಾಮ ಕೃಷಿ ಭೂಮಿಯೂ ಫಲವತ್ತತೆ ಕಳೆದುಕೊಳ್ಳುತ್ತಿದೆ. ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ಬೆಲೆ ಸಿಗುತ್ತಿಲ್ಲ. ಕೃಷಿ ನೀತಿಗಳು ರೈತಸ್ನೇಹಿಯಾಗಿಲ್ಲದ ಪರಿಣಾಮ ಕೃಷಿ ಕ್ಷೇತ್ರದ ಸಮಸ್ಯೆಗಳು ನಿವಾರಣೆಯಾಗಿಲ್ಲ. 2004ರಲ್ಲಿ ರಚನೆಯಾದ ಸ್ವಾಮಿನಾಥನ್ ಆಯೋಗ 2006ರ ವೇಳೆಗೆ 5 ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಬಗ್ಗೆ ಸಂಸತ್ತಿನಲ್ಲಿ ಒಂದು ನಿಮಿಷ ಚರ್ಚೆಯೂ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಡಿಕೆ ಬಗ್ಗೆ ಅಪಪ್ರಚಾರ’

‘ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಅಡಿಕೆಯನ್ನು ಇದೀಗ ಬಯಲುಸೀಮೆಯಲ್ಲಿಯೂ ಬೆಳೆಯಲಾಗುತ್ತಿದೆ. ಅಡಿಕೆ ಬೆಲೆಯಲ್ಲಿ ಸ್ಥಿರತೆ ಇಲ್ಲದ ಪರಿಣಾಮ ಬೆಳೆಗಾರರು ಗೊಂದಲಕ್ಕೆ ಸಿಲುಕುತ್ತಿದ್ದಾರೆ.ಇಂಡೋನೇಷ್ಯಾದ ಕಾಡುಗಳಲ್ಲಿ ಬೆಳೆಯುವ ಕಳಪೆ ಗುಣಮಟ್ಟದ ಅಡಿಕೆಗಳಿಗೆ ಶ್ರೀಲಂಕಾದಲ್ಲಿ ಗೋಣಿಚೀಲ ಬದಲಾಯಿಸಿ, ನಮ್ಮದೇಶಕ್ಕೆ ರಫ್ತು ಮಾಡಲಾಗುತಿತ್ತು. ಇದೀಗ ಗುಣಮಟ್ಟದ ಮಾನದಂಡವನ್ನು ನಿಗದಿಪಡಿಸಿದ ಪರಿಣಾಮ ವಾಮಮಾರ್ಗದಿಂದ ದೇಶ ಪ್ರವೇಶಿಸುತ್ತಿದ್ದ ಅಡಿಕೆ ರಾಶಿಗಳಿಗೆ ಕಡಿವಾಣ ಬಿದ್ದಿದೆ’ ಎಂದು ಕರ್ನಾಟಕ ಅಡಿಕೆ ಕಾರ್ಯಪಡೆ ಅಧ್ಯಕ್ಷ ಅರಗ ಜ್ಞಾನೇಂದ್ರ ತಿಳಿಸಿದರು.

‘ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಕೆಲವರು ಅಪಪ್ರಚಾರ ಮಾಡಿದರು. ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.ಆರ್‌ಸಿಇಪಿ ಒಪ್ಪಂದಕ್ಕೆ ಪ್ರಧಾನಿ ಮೋದಿ ಅವರು ಸಹಿ ಹಾಕದರೆ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದರು’ ಎಂದರು.

‘ಅಮೆರಿಕದಲ್ಲಿ ಹಸುಗಳಿಗೆ ಮಾಂಸಾಹಾರ’

ಗುಜರಾತ್‌ನ ಆನಂದ್‌ ಡೈರಿ ಮುಖ್ಯಸ್ಥ ಜೈನ್ ಮೆಹ್ತಾ, ‘ಪ್ರಪಂಚದಲ್ಲಿ ಒಟ್ಟು ಉತ್ಪಾದನೆಯಾಗುವ ಹಾಲಿನಲ್ಲಿ ಶೇ 20ರಷ್ಟು ಹಾಲನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಹಾಲು ಉತ್ಪಾದನೆ ಬೆಳವಣಿಗೆ ಶೇ 4.5ರಷ್ಟಿದೆ. ಪ್ರಪಂಚದಲ್ಲಿ ಈ ಬೆಳವಣಿಗೆ ಶೇ 2.3ರಷ್ಟಿದೆ. 50 ಲಕ್ಷ ಜನಸಂಖ್ಯೆ ಇರುವ ನ್ಯೂಜಿಲೆಂಡ್‌ನಲ್ಲಿ ಕೇವಲ 10ಸಾವಿರ ರೈತರಿದ್ದಾರೆ. ಅಲ್ಲಿ ಉತ್ಪಾದನೆಯಾಗುವ ಒಟ್ಟು ಹಾಲಿನಲ್ಲಿ ಶೇ 95ರಷ್ಟನ್ನು ರಫ್ತು ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಮಲ್ಲಿ ಹಸುಗಳಿಗೆ ಹುಲ್ಲು ಸೇರಿದಂತೆ ಸಸ್ಯಹಾರವನ್ನು ನೀಡಲಾಗುತ್ತದೆ. ಆದರೆ, ಅಮೆರಿಕದಲ್ಲಿ ಮಾಂಸಾಹಾರವನ್ನೂ ನೀಡಲಾಗುತ್ತಿದೆ. ಇದರಿಂದಾಗಿ ಆ ದೇಶದಿಂದ ರಫ್ತಾಗುವ ಗಿಣ್ಣು ಕೂಡ ಪೂರ್ಣ ಪ್ರಮಾಣದಲ್ಲಿ ಸಸ್ಯಹಾರವಲ್ಲ. ಆದ್ದರಿಂದ ಆಮದಿಗೆ ಕಡಿವಾಣ ಹಾಕಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.