ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ವರ್ಷದ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಮುಂದಿನ ವರ್ಷ ಆನ್‌ಲೈನ್ ಪರೀಕ್ಷೆ ನಡೆಸುವ ಅದರ ನಿರೀಕ್ಷೆಯೂ ಕೈಗೂಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಆನ್‌ಲೈನ್ ಪರೀಕ್ಷೆ ನಡೆಯುವುದಾದರೆ ಮೂರು ದಿನದ ಬದಲಿಗೆ ಒಂದೇ ದಿನದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳ ಸ್ವರೂಪಕ್ಕಿಂತಲೂ ಮುಖ್ಯವಾಗಿ ಸುಮಾರು 2 ಲಕ್ಷದಷ್ಟು ಕಂಪ್ಯೂಟರ್ ಲಭ್ಯವಿರಬೇಕು. ನೆಟ್‌ವರ್ಕ್ ಸಮರ್ಪಕವಾಗಿರಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅದಕ್ಕಾಗಿ ಸಜ್ಜುಗೊಳಿಸುವ ದೊಡ್ಡ ಸವಾಲು ಇದೆ. ಒಂದು ವರ್ಷದಲ್ಲಿ ಇದೆಲ್ಲ ಸಾಧ್ಯವಾಗುತ್ತದೆಯೇ ಎಂಬ ಸಂಶಯ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಗಳು ಹೇಳಿವೆ.
ಆರಂಭಿಕ ವರ್ಷದ ‘ನೀಟ್’ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿತ್ತು. ಆದರೆ ಅದು ಸಮರ್ಪಕವಾಗಿ ಆಗದೆ ಇದ್ದುದರಿಂದ ಆಫ್‌ಲೈನ್‌ನಲ್ಲೂ ಪರೀಕ್ಷೆ ನಡೆಸಲಾಯಿತು. ಮರು ವರ್ಷ ಆನ್‌ಲೈನ್ ಉಸಾಬರಿಗೆ ಹೋಗದೆ ಆಫ್‌ಲೈನ್‌ನಲ್ಲೇ ಪರೀಕ್ಷೆ ನಡೆದಿದೆ. ಬಹಳ ದೊಡ್ಡ ಮಟ್ಟದ ತಯಾರಿ ನಡೆಸದೆ ಹೋದರೆ ಆನ್‌ಲೈನ್ ಸಿಇಟಿಗೆ ದೊಡ್ಡ ಅಡಚಣೆ ಎದುರಾಗುವ ಅಪಾಯ ಇದೆ ಎಂದೂ ಅಧಿಕಾರಿಯೊಬ್ಬರು ಹೇಳಿದರು.
ಈಗಾಗಲೇ ವರದಿಯಾಗಿರುವಂತೆ ಈ ವರ್ಷದ ಸಿಇಟಿ ಏಪ್ರಿಲ್ 22 ಮತ್ತು 23ರಂದು ಹಾಗೂ ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ 24ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.