ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವೊಂದರಲ್ಲಿ, ತನಿಖಾಧಿಕಾರಿ ಕೋರಿದ್ದ ಮಾಹಿತಿ ನೀಡಲು ನಿರಾಕರಿಸಿದ್ದ, ‘ಫೋನ್ ಪೇ’ ಕಂಪನಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ‘ಹೊಣೆಗಾರಿಕೆ ಮತ್ತು ಗೋಪ್ಯತೆ ಒಟ್ಟೊಟ್ಟಿಗೆ ಸಾಗಬೇಕು’ ಎಂದು ನಿರ್ದೇಶಿಸಿದೆ.
'ಬಳಕೆದಾರರು ಬಳಸಿರುವ ಖಾತೆಯ ಸಂಪೂರ್ಣ ಮಾಹಿತಿಯನ್ನು ಒದಗಿಸಿ’ ಎಂದು ಕೋರಿ, ಬೆಂಗಳೂರು ಗ್ರಾಮಾಂತರ ಸೆನ್ (ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ) ಠಾಣೆಯ ಪೊಲೀಸರು, ‘ಫೋನ್ ಪೇ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಕೋರಿದ್ದರು. ಅಪರಾಧ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ನೀಡಿದ್ದ ಈ ನೋಟಿಸ್ ಪ್ರಶ್ನಿಸಿ ಫೋನ್ ಪೇ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ 3757/2023 ಜಿಎಂ-ಪೊಲೀಸ್) ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಫೋನ್ ಪೇ ಎಂಬುದು ಒಂದು ಡಿಜಿಟಲ್ ಮಧ್ಯಸ್ಥಗಾರ ವ್ಯವಸ್ಥೆ. ಇದು ಪೇಮೆಂಟ್ ಮತ್ತು ಸೆಟ್ಲಮೆಂಟ್ ಸಿಸ್ಟಮ್ ಹಾಗೂ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಕಾಯ್ದೆಗಳಡಿ ಕಾರ್ಯನಿರ್ವಹಿಸುತ್ತದೆ. ನ್ಯಾಯಾಲಯದ ಆದೇಶದ ಹೊರತಾಗಿ ಪೋಲಿಸರೂ ಸೇರಿದಂತೆ ಇತರ ಯಾರಿಗೇ ಆಗಲಿ ಯಾವುದೇ ಗೋಪ್ಯ ಮಾಹಿತಿಯನ್ನು ಒದಗಿಸುವುದಕ್ಕೆ ಅವಕಾಶವಿಲ್ಲ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.
‘ಯಾವುದೇ ಪ್ರಕರಣದಲ್ಲಿ ತನಿಖಾಧಿಕಾರಿಯು, ಕಾನೂನುಬದ್ಧವಾಗಿ ಸಾಕ್ಷಿ ಸಂಗ್ರಹಿಸಿ, ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹಂತದಲ್ಲಿದ್ದಾಗ; ಗ್ರಾಹಕರ ಖಾಸಗೀತನದ ರಕ್ಷಣೆಯ ನೆಪದಲ್ಲಿ ತನಿಖಾಧಿಕಾರಿಯ ಕೈ ಕಟ್ಟಿಹಾಕಲಾಗದು’ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಸಾರ್ವಜನಿಕ ಹಿತಾಸಕ್ತಿ ಹೊಂದಿದ ಮತ್ತು ಕ್ರಿಮಿನಲ್ ಆರೋಪ ಹೊತ್ತ ಪ್ರಕರಣಗಳಲ್ಲಿ ತನಿಖೆಯ ಮುಂದೆ ದತ್ತಾಂಶ ರಕ್ಷಣೆಯ ಕರ್ತವ್ಯ ತಲೆಬಾಗಲೇಬೇಕಾಗುತ್ತದೆ. ಈ ನೆಲೆಯಲ್ಲಿ ಪೊಲೀಸರು ಫೋನ್ ಪೇಗೆ ಜಾರಿ ಮಾಡಿರುವ ನೋಟಿಸ್ ಕಾನೂನುಬಾಹಿರವಲ್ಲ. ಈ ಪ್ರಕರಣದಲ್ಲಿ ಹಲವು ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿ ಅಕ್ರಮ ಹಣಕಾಸು ವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಬೇಕಿರುವ ತನಿಖಾಧಿಕಾರಿಯ ಕಳಕಳಿ ಅಡಗಿದೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್‌ಗಾಗಿ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ಕ್ರೀಡಾ ವೆಬ್‌ಸೈಟ್‌ವೊಂದಕ್ಕೆ ಫೋನ್ ಪೇ ಮೂಲಕ ₹6 ಸಾವಿರ ಪಾವತಿ ಮಾಡಿದ್ದರು. ಆದರೆ, ಈ ವೆಬ್‌ಸೈಟ್ ನಿರ್ಬಂಧಿಸಲಾದ ಕಾರಣ ಅವರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಪರಿಣಾಮ ಅವರು, ‘ನನಗೆ ವಂಚನೆಯಾಗಿದೆ. ಹಣ ವಾಪಸ್ ಕೊಡಿಸಿ’ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಇದರ ಆಧಾರದಲ್ಲಿ ಪೊಲೀಸರು, ಫೋನ್ ಪೇ ಕಂಪನಿಗೆ 2022ರ ಡಿಸೆಂಬರ್‌ನಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 91ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದರು. ಪ್ರಕರಣದಲ್ಲಿ ಫೋನ್ ಪೇ ಕಂಪನಿ ಪರ ಹೈಕೋರ್ಟ್ ವಕೀಲ ನಿತಿನ್ ರಮೇಶ್ ಮತ್ತು ಸರ್ಕಾರದ ಪರ ಮೊಹಮದ್ ಜಾಫರ್ ಶಾ ವಾದ ಮಂಡಿಸಿದ್ದರು.
* ಭಾರತ–ದ.ಆಫ್ರಿಕಾ ಪಂದ್ಯದ ವೇಳೆ ಬೆಟ್ಟಿಂಗ್ * ಪೊಲೀಸ್ ನೋಟಿಸ್ ಪ್ರಶ್ನಿಸಿದ್ದ ಫೋನ್ ಪೇ
ತನಿಖೆಯನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಗೋಪ್ಯತಾ ರಕ್ಷಣೆಯ ಹೆಸರಿನಲ್ಲಿ ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ.ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಅನೂಹ್ಯ ಅಪರಾಧಗಳು...
‘ಇಂದಿನ ದಿನಗಳಲ್ಲಿ ಹೊಸ ನಮೂನೆಯ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು ಸಾಂಪ್ರದಾಯಿಕ ಅಪರಾಧಗಳು ಹಿಂದೆ ಸರಿದಿವೆ. ಇವುಗಳಲ್ಲಿ ಸೈಬರ್ ಅಪರಾಧಗಳು ಗುಪ್ತಗಾಮಿನಿಯಾಗಿದ್ದು ಅನೂಹ್ಯವಾದ ಆಧುನಿಕತೆಯ ಸ್ಪರ್ಶ ಪಡೆದಿವೆ. ಹೀಗಾಗಿ ಡಿಜಿಟಲ್ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ವಿಪುಲ ಅಧಿಕಾರ ನೀಡಬೇಕಿದೆ ಮತ್ತು ಇಂತಹ ಅಪರಾಧಗಳ ಮಗ್ಗಲುಗಳನ್ನು ತಡಮಾಡದೆ ಮುರಿಯಬೇಕಿದೆ’ ಎಂದು ನ್ಯಾಯಪೀಠ ಗುಟುರು ಹಾಕಿದೆ. ಶಾಸನಬದ್ಧ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಳ್ಳಲು ‘ಪೇಮೆಂಟ್ ಅಂಡ್ ಸೆಟಲ್‌ಮೆಂಟ್ ಸಿಸ್ಟಮ್ ಕಾಯ್ದೆ–2007’ ಮತ್ತು ‘ಬ್ಯಾಂಕರ್ಸ್ ಬುಕ್ಸ್ ಸಾಕ್ಷ್ಯ ಕಾಯ್ದೆ–1891’ಗಳು ಅನುಮತಿ ನೀಡುತ್ತವೆ. ಅಂತೆಯೇ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು–2011ರ ಅನ್ವಯ ತನಿಖಾಧಿಕಾರಿಯು ಕಾನೂನಿನ ಪರಿಮಿತಿಯಲ್ಲಿ ಮಾಹಿತಿ ಕೋರಿದಾಗ 72 ಗಂಟೆಗಳ ಒಳಗಾಗಿ ಒದಗಿಸಬೇಕು’ ಎಂಬ ಅಂಶವನ್ನು ನ್ಯಾಯಪೀಠ ತೀರ್ಪಿನಲ್ಲಿ ಗಮನಾರ್ಹವಾಗಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.