ADVERTISEMENT

ಆನ್‌ಲೈನ್‌ನಲ್ಲೇ ಪದವಿ ಕೋರ್ಸ್‌ ಮಾರ್ಚ್‌ನಿಂದ ಆರಂಭ: ಅಶ್ವತ್ಥನಾರಾಯಣ

ಎಲ್ಲ ವಿ.ವಿಗಳಲ್ಲೂ ಅನುಷ್ಠಾನ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 18:15 IST
Last Updated 1 ಡಿಸೆಂಬರ್ 2022, 18:15 IST
   

ಬೆಂಗಳೂರು: 2023 ರ ಮಾರ್ಚ್‌ ವೇಳೆಗೆ ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲೂ ಕನಿಷ್ಠ ಒಂದು ಪದವಿ ಕೋರ್ಸ್‌ ಅನ್ನು ಆನ್‌ಲೈನ್ ರೂಪದಲ್ಲಿ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ‘ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌’ಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ಡಿಜಿಟಲ್‌ ಕಲಿಕಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ಈ ತಿಂಗಳ ಕೊನೆಯ ವೇಳೆಗೆ ಪ್ರತಿ ವಿಶ್ವವಿದ್ಯಾಲಯವೂ ಅಕಾಡೆಮಿಕ್‌ ಬ್ಯಾಂಕ್‌ ಆಫ್‌ ಕ್ರೆಡಿಟ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಮೂರು ತಿಂಗಳಲ್ಲಿ ಕನಿಷ್ಠ 5 ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಅವರು ವಿವರಿಸಿದರು.

ADVERTISEMENT

ಆಧುನಿಕ ಜಗತ್ತಿನಲ್ಲಿ ಯುವಜನರಿಗೆ ಕೌಶಲ ಕಲಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಸ್ಕಿಲ್‌ ಕೆನಕ್ಟ್ ಪೋರ್ಟಲ್‌ಗೆ ಹೊಸ ರೂಪ ನೀಡಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವೆ ಸಕ್ರಿಯ ಸಂಬಂಧ ಉಂಟಾಗಲಿದೆ ಎಂದರು.

ಜಪಾನ್‌ ಭಾಷೆ ಕಲಿಕೆಗೆ ವ್ಯವಸ್ಥೆ:

ಇಂಗ್ಲಿಷ್‌ ಭಾಷೆಯ ಕಲಿಕೆ ಲ್ಯಾಬ್‌ಗಳ ಸ್ಥಾಪನೆಯ ಜತೆಗೆ, ಜಪಾನಿನಲ್ಲಿ ರಾಜ್ಯದ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಜಪಾನಿ ಭಾಷೆಯ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಅಲ್ಲದೆ, 13,500 ಮಹಿಳಾ ಉದ್ಯಮಿಗಳಿಗೆ ಸಿ–ಡಾಕ್‌ ಮೂಲಕ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಒಟ್ಟಿನಲ್ಲಿ 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಸುಶಾಸನ ಮಾಸಾಚರಣೆ ಅಂಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಸ ರೂಪ ನೀಡಲಾಗಿದೆ. ಇಲ್ಲಿ ನೇಮಕಾತಿ ವಿಭಾಗ ಮತ್ತು ಸೀಟು ಹಂಚಿಕೆ ವಿಭಾಗಗಳನ್ನು ಸೃಷ್ಟಿಸಿ 20 ಹೊಸ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಇದಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

5 ಕಂಪನಿಗಳ ಜತೆ ಒಡಂಬಡಿಕೆ

ಟ್ಯಾಲೆನ್ಷಿಯಾ ಗ್ಲೋಬಲ್‌, ಇನ್ನೋವ್‌ಸೋರ್ಸ್‌, ಫ್ಯೂಯೆಲ್‌, ಎಐಎಸ್‌ಇಸಿಟಿ ಮತ್ತು ಇನ್ಫಿಕ್ವಿಟಿ ಆಟೋ ಟೆಕ್ನಾಲಜೀಸ್‌ ಕಂಪನಿಗಳ ಮುಖ್ಯಸ್ಥರೊಂದಿಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ಅವರು ಹಲವು ಒಪ್ಪಂದಗಳಿಗೆ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.