ADVERTISEMENT

ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 18:34 IST
Last Updated 22 ಮಾರ್ಚ್ 2021, 18:34 IST
ಸುರೇಶ್ ಕುಮಾರ್
ಸುರೇಶ್ ಕುಮಾರ್   

ಬೆಂಗಳೂರು: ‘ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಆರಂಭಿಸಿವೆ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಪೋಷಕರಿಂದ ದೂರುಗಳು ಬರುತ್ತಿವೆ. ಆನ್‌ಲೈನ್ ಶಿಕ್ಷಣ ನಿಯಮಬಾಹಿರವಾಗಿ ನಡೆಯುತ್ತಿರುವ ಬಗ್ಗೆ ಕ್ರಮಕ್ಕೆ ಮುಂದಾದರೆ, ಖಾಸಗಿ ಶಾಲೆಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಸಾಧ್ಯತೆಗಳಿದೆ’ ಎಂದರು.

‘ಆನ್‌ಲೈನ್ ಶಿಕ್ಷಣದಿಂದಾಗಿ ಮಕ್ಕಳು ಕಣ್ಣು ಮಿಟುಕಿಸಲೂ ಆಗದಂಥ ಸ್ಥಿತಿ ಬಂದಿದೆ. ಹಲವು ಪೋಷಕರು ತಮ್ಮ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸುತ್ತಿದ್ದಾರೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆಯ ಜೊತೆಗೆ ಮಕ್ಕಳ ಕಣ್ಣಿನ ಕಡೆಗೂ ಸರ್ಕಾರ ಗಮನ ನೀಡಲಿ. ತಾಲ್ಲೂಕು ಮಟ್ಟದಲ್ಲಿ ಕಣ್ಣಿನ ಪರೀಕ್ಷೆಗೆ ಬೇಕಾದ ವ್ಯವಸ್ಥೆ ಮಾಡಬೇಕು’ ಎಂದು ವೆಂಕಟೇಶ್‌ ಸಲಹೆ ನೀಡಿದರು.

ADVERTISEMENT

‘ಆನ್‌ಲೈನ್‌ ಶಿಕ್ಷಣ ಮಕ್ಕಳ ಹಕ್ಕು ಎಂದು ಹೈಕೋರ್ಟ್ ಹೇಳಿದ್ದರಿಂದ ಸರ್ಕಾರ, ತಜ್ಞರ ಸಮಿತಿ ನೇಮಿಸಿತ್ತು. ಆ ಸಮಿತಿಯ ಶಿಫಾರಸಿನಂತೆ ಆನ್‌ಲೈನ್ ಶಿಕ್ಷಣಕ್ಕೆ ಸರ್ಕಾರ ಸಮಯ ನಿಗದಿ ಮಾಡಿದೆ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಅದನ್ನು ಮೀರಿ ಆನ್‌ಲೈನ್ ಶಿಕ್ಷಣ ನೀಡುತ್ತಿವೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.