ADVERTISEMENT

ಆನ್‌ಲೈನ್ ಶಿಕ್ಷಣ: ನೋಡಲ್ ಅಧಿಕಾರಿ ನೇಮಕಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:39 IST
Last Updated 6 ನವೆಂಬರ್ 2020, 16:39 IST
ಸುರೇಶ್‌ಕುಮಾರ್
ಸುರೇಶ್‌ಕುಮಾರ್   

ಬೆಂಗಳೂರು: ‘ಆನ್‌ಲೈನ್‌ ಶಿಕ್ಷಣದ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬರುತ್ತಿರುವ ದೂರುಗಳನ್ನು ನಿರ್ವಹಿಸಲು ನೋಡಲ್‌ ಅಧಿಕಾರಿ ನೇಮಕ ಮಾಡಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಸೂಚನೆ ನೀಡಿದರು.

ಅಧಿಕಾರಿಗಳ ಜತೆಶನಿವಾರ ಸಭೆ ನಡೆಸಿದ ಅವರು, ‘ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿ ನೇಮಿಸಬೇಕು. ಆನ್‌ಲೈನ್‌ ಶಿಕ್ಷಣದಲ್ಲಿನ ಸಮಸ್ಯೆ ಮತ್ತು ದೂರುಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವ ಕೆಲಸವಾಗಬೇಕು’ ಎಂದು ಹೇಳಿದರು.

‘ಬೆಂಗಳೂರು, ಕಲಬುರ್ಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿವೆ. ಸಾರ್ವಜನಿಕರು ಈ ಕುರಿತು ದೂರುಗಳನ್ನು ಇಲಾಖೆಯ ‘ಶಿಕ್ಷಣವಾಣಿ’ ಸಹಾಯವಾಣಿಗೆ (18004257302) ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆಗೆ (9483045130) ಸಲ್ಲಿಸಿ ಇಲಾಖೆಯ ಗಮನಕ್ಕೆ ತರಬಹುದು’ ಎಂದರು.

ADVERTISEMENT

‘ಯಾವುದೇ ಶಾಲೆಗಳಿರಲಿ ಆ‌‌ನ್‌ಲೈನ್ ಶಿಕ್ಷಣವನ್ನು ತಜ್ಞರ ಸಮಿತಿ ಶಿಫಾರಸಿನನ್ವಯ, ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ವಯ ವೈಜ್ಞಾನಿಕವಾಗಿಯೇ ನಿರ್ವಹಿಸಬೇಕು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕ್ಷೇತ್ರಶಿಕ್ಷಣಾಧಿಕಾರಿಗಳು ಆನ್‌ಲೈನ್ ತರಗತಿಗಳ ಪರಾಮರ್ಶೆ ಮಾಡಬೇಕು. ಕೇಂದ್ರ ಕಚೇರಿಯಲ್ಲಿ ಈ ಕುರಿತ ಮಾಹಿತಿ ಯಾವುದೇ ಸಂದರ್ಭದಲ್ಲಿಯೂ ದೊರೆಯವಂತಾಗಬೇಕು’ ಎಂದು ಸುರೇಶ್‌ಕುಮಾರ್ ಸೂಚಿಸಿದರು.

‘ಆನ್‌ಲೈನ್ ಬೋಧನೆಯನ್ನು ಹಗಲು-ರಾತ್ರಿಯನ್ನದೇ ಮಾಡಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಆನ್‍ಲೈನ್ ಬೋಧನಾವಧಿಯನ್ನು ನಿಗದಿ ಪಡಿಸಬೇಕು’ ಎಂದು ಸುರೇಶ್‌ಕುಮಾರ್‌, ಆಯುಕ್ತರಿಗೆ ಸೂಚಿಸಿದರು.

‘ಜಿಲ್ಲೆ, ತಾಲ್ಲೂಕು, ಬ್ಲಾಕ್, ಕ್ಲಸ್ಟರ್ ಮಟ್ಟದಲ್ಲಿ ಶಾಲಾವಧಿಯನ್ನು ಗಮನಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.