ADVERTISEMENT

ಆನ್‌ಲೈನ್‌ ಗೇಮಿಂಗ್‌: ವರದಿ ಬಂದ ಬಳಿಕ ಕ್ರಮ; ಗೃಹ ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:02 IST
Last Updated 12 ಆಗಸ್ಟ್ 2025, 16:02 IST
   

ಬೆಂಗಳೂರು: ‘ಆನ್‌ಲೈನ್‌ ಗೇಮಿಂಗ್‌ಗೆ ನಿಯಂತ್ರಣ ಹೇರುವ ಸಂಬಂಧ ಡಿಜಿಪಿ ಪ್ರಣಬ್‌ ಮೊಹಾಂತಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾದಕ ವಸ್ತುಗಳ ವ್ಯಸನದ ರೀತಿಯಲ್ಲೇ ಆನ್‌ಲೈನ್‌ ಗೇಮಿಂಗ್‌ ಕೂಡ ಯುವಜನತೆಯ ಭವಿಷ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತಿದೆ. ಆ ಕಾರಣಕ್ಕೆ 2021ರಲ್ಲಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತಂದು ಕೆಲವು ಅಂಶಗಳನ್ನು ಸೇರಿಸಲಾಗಿತ್ತು. ಇದನ್ನು ಹೈಕೋರ್ಟ್‌ 2022ರ ಫೆ. 14ರಂದು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ಬಾಕಿ ಇದೆ’ ಎಂದರು.

‘ಆನ್‌ಲೈನ್‌ ಗೇಮ್‌ ನಡೆಸುವವರ ಜೊತೆ ಕಳೆದ ಏಪ್ರಿಲ್‌ 8ರಂದು ಸಭೆ ನಡೆಸಿ ಚರ್ಚಿಸಿದ್ದು, ನಿಯಂತ್ರಣಕ್ಕೆ ಅವರೂ ಒಪ್ಪಿದ್ದಾರೆ. ಅದರಂತೆ ಪ್ರಣಬ್‌ ಮೊಹಾಂತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ‘ಗೇಮ್‌ ಆಫ್‌ ಚಾನ್ಸ್‌’, ‘ಗೇಮ್‌ ಆಫ್‌ ಸ್ಕಿಲ್‌’ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕಿದೆ’ ಎಂದರು.

ADVERTISEMENT

‘ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಕೀಲರನ್ನು ನಿಯೋಜಿಸಿ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಬೇಕು. ಜತೆಗೆ ಸಮಿತಿಯಿಂದ ಶೀಘ್ರವಾಗಿ ವರದಿಯಿಂದ ಪಡೆದು ನಿಯಂತ್ರಣ ಹೇರಬೇಕು’ ಎಂದು ಬಿಜೆಪಿಯ ಸುರೇಶ್‌ ಕುಮಾರ್‌ ಒತ್ತಾಯಿಸಿದರು. ಆರಗ ಜ್ಞಾನೇಂದ್ರ ಕೂಡ ದನಿಗೂಡಿಸಿದರು.‌

ಸಚಿವ ಪ್ರಿಯಾಂಕ್‌ ಖರ್ಗೆ, ‘ಆನ್‌ಲೈನ್‌ ಗೇಮಿಂಗ್‌ ವ್ಯವಹಾರವು 4.5 ಬಿಲಿಯನ್‌ ಡಾಲರ್‌ನಷ್ಟಿದ್ದು, ಮೂರು ವರ್ಷಗಳಲ್ಲಿ ಒಂಬತ್ತು ಬಿಲಿಯನ್‌ ಡಾಲರ್‌ಗೆ ವಿಸ್ತರಿಸಲಿದೆ. ದೇಶದಲ್ಲಿ 59 ಕೋಟಿ ಮಂದಿ ಆನ್‌ಲೈನ್‌ ಗೇಮಿಂಗ್‌ ಆಡುತ್ತಿದ್ದು, 14 ಕೋಟಿ ಮಂದಿ ಹಣ ಕೊಟ್ಟು ಆನ್‌ಲೈನ್‌ ಗೇಮ್‌ ಆಡುತ್ತಾರೆ. ಇತ್ತೀಚೆಗೆ ಪೂರ್ವ ಯುರೋಪ್‌, ಚೀನಾ, ದಕ್ಷಿಣ ಅಮೆರಿಕ ಮೂಲದ ವಿದೇಶಿ ಸರ್ವರ್‌ ಆಧಾರಿತ ಆನ್‌ಲೈನ್‌ ಗೇಮಿಂಗ್‌ ಆಡುತ್ತಿದ್ದಾರೆ. ಅದರಲ್ಲಿ ನಷ್ಟವಾದರೆ ಪತ್ತೆ ಹಚ್ಚುವುದು ಕೂಡ ಕಷ್ಟ. ಹೀಗಾಗಿ, ಕೇಂದ್ರ- ರಾಜ್ಯ ಸರ್ಕಾರ ಒಟ್ಟಾಗಿ ನಿಯಂತ್ರಣ ಹೇರಬೇಕು’ ಎಂದರು.

ಈ ವಿಷಯದಲ್ಲಿ ಅರ್ಧ ಗಂಟೆ ವಿಶೇಷ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌, ಈ ಚರ್ಚೆಗೆ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.