ADVERTISEMENT

ಯುವತಿಯರ ವಂಚಿಸುತ್ತಿದ್ದ ‘ಆನ್‌ಲೈನ್ ವರ‘ ಬಲೆಗೆ

* ವೈವಾಹಿಕ ಜಾಲತಾಣದಲ್ಲಿ ನಕಲಿ ಖಾತೆ * ಐವರು ಯುವತಿಯರಿಂದ ₹ 25 ಲಕ್ಷ ಪಡೆದಿರುವ ಆರೋಪಿ

ಸಂತೋಷ ಜಿಗಳಿಕೊಪ್ಪ
Published 20 ಜುಲೈ 2020, 17:20 IST
Last Updated 20 ಜುಲೈ 2020, 17:20 IST
ಜಗನ್ನಾಥ ಸಜ್ಜನ್
ಜಗನ್ನಾಥ ಸಜ್ಜನ್   

ಬೆಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ನಾಟಕವಾಡಿ ಹಣ ಹಾಗೂ ಆಭರಣ ಪಡೆದು ಪರಾರಿಯಾಗುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

'ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಜಗನ್ನಾಥ್ ಸಜ್ಜನ್ ಅಲಿಯಾಸ್ ಎಸ್‌.ರಮೇಶ್ (34) ಬಂಧಿತ. ಆತನಿಂದ ₹ 6.80 ಲಕ್ಷ ನಗದು, ಕಾರು, ಎರಡು ಮೊಬೈಲ್‌ಗಳು, 22 ಸಿಮ್‌ ಕಾರ್ಡ್‌ಗಳು, 5 ಬ್ಯಾಂಕ್‌ ಪಾಸ್‌ಬುಕ್‌ಗಳು ಹಾಗೂ 22 ಎಟಿಎಂ ಕಾರ್ಡ್‌ಗಳು, ತಲಾ 3 ಪಾನ್ ಕಾರ್ಡ್‌ಗಳು ಹಾಗೂ ಚುನಾವಣಾ ಗುರುತಿನ ಚೀಟಿ ಜಪ್ತಿ ಮಾಡಲಾಗಿದೆ’ ಎಂದು ಬನಶಂಕರಿ ಪೊಲೀಸರು ಹೇಳಿದರು.

‘ವರನನ್ನು ಹುಡುಕುತ್ತಿದ್ದ ಠಾಣೆ ವ್ಯಾಪ್ತಿಯ ಯುವತಿಯೊಬ್ಬರು, ವೈವಾಹಿಕ ಜಾಲತಾಣವೊಂದರಲ್ಲಿ ಖಾತೆ ತೆರೆದಿದ್ದರು. ಸ್ವ–ವಿವರ ಹಾಗೂ ಫೋಟೊವನ್ನು ಅಪ್‌ಲೋಡ್ ಮಾಡಿದ್ದರು. ಅದೇ ಜಾಲತಾಣದಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ, ಅವರ ಮನೆಗೆ ಹೋಗಿ ಹೆಣ್ಣು ನೋಡುವ ಕಾರ್ಯ ಮುಗಿಸಿದ್ದ. ಆದಷ್ಟು ಬೇಗನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ.’

ADVERTISEMENT

‘ಕೆಲ ದಿನಗಳ ಬಳಿಕ ಯುವತಿ ಹೆಸರಿನಲ್ಲಿ ನಿವೇಶನ ಖರೀದಿಸುವ ಸೋಗಿನಲ್ಲಿ ₹ 7 ಲಕ್ಷ ಪಡೆದುಕೊಂಡು ನಾಪತ್ತೆಯಾಗಿದ್ದ. ನೊಂದ ಯುವತಿ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ವಿವರಿಸಿದರು.

ನಕಲಿ ಖಾತೆಗಳೇ ಹೆಚ್ಚು

‘ಬಿ.ಎ ಪದವೀಧರನಾದ ಆರೋಪಿ, 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಂತರ ಹಾಸನಕ್ಕೆ ವಾಸ್ತವ್ಯ ಬದಲಿಸಿದ್ದ’ ಎಂದು ಪೊಲೀಸರು ಹೇಳಿದರು.

‘ರಮೇಶ್, ರಾಮ್ ಸೇರಿದಂತೆ ಹಲವು ನಕಲಿ ಹೆಸರುಗಳನ್ನು ಬಳಸಿಕೊಂಡು ಆರೋಪಿ, ವೈವಾಹಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದ. ಅದರ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಿತ್ಯ ಚಾಟಿಂಗ್ ಮಾಡುತ್ತಿದ್ದ. ತಾನೊಬ್ಬ ಖಾಸಗಿ ಕಂಪನಿ ಉದ್ಯೋಗಿ. ಸಾವಿರಾರು ರೂಪಾಯಿ ಸಂಬಳವಿರುವುದಾಗಿ ಹೇಳಿ ಯುವತಿಯರನ್ನು ನಂಬಿಸುತ್ತಿದ್ದ.’

‘ಮದುವೆ ಮಾತುಕತೆ ನಡೆಸುತ್ತಿದ್ದ ಆರೋಪಿ, ನಿವೇಶನ ಖರೀದಿ ಹಾಗೂ ಆರ್ಥಿಕ ಕಷ್ಟವಿರುವುದಾಗಿ ಹೇಳಿ ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ. ಬಳಿಕ ಮದುವೆಯಾಗದೇ ನಾಪತ್ತೆಯಾಗುತ್ತಿದ್ದ. ವಂಚನೆ ಬಗ್ಗೆ ಪ್ರಶ್ನಿಸಿದರೆ ಯುವತಿಯರಿಗೆ ಜೀವಬೆದರಿಕೆ ಹಾಕುತ್ತಿದ್ದ. ಇದುವರೆಗೆ ಆರೋಪಿ ಐವರು ಯುವತಿಯರಿಂದ ₹ 25 ಲಕ್ಷ ಪಡೆದು ವಂಚಿಸಿರುವ ಮಾಹಿತಿ ಇದೆ. ಒಬ್ಬ ಯುವತಿ ಮಾತ್ರ ದೂರು ನೀಡಿದ್ದಾರೆ. ಯಾರಿಗಾದರೂ ವಂಚನೆಯಾಗಿದ್ದರೆ ಠಾಣೆಗೆ ಬಂದು ದೂರು ನೀಡಬಹುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.