ADVERTISEMENT

ಉದ್ಯೋಗ ಆಕಾಂಕ್ಷಿಗಳಿಗೆ ‘ಆನ್‌ಲೈನ್‌ ಉದ್ಯೋಗ ವಿನಿಮಯ ಕೇಂದ್ರ’

ಎ.ಎಂ.ಸುರೇಶ
Published 12 ಅಕ್ಟೋಬರ್ 2025, 22:48 IST
Last Updated 12 ಅಕ್ಟೋಬರ್ 2025, 22:48 IST
   

ಬೆಂಗಳೂರು: ರಾಜ್ಯದಲ್ಲಿನ ಲಕ್ಷಾಂತರ ಮಂದಿ ಉದ್ಯೋಗ ಆಕಾಂಕ್ಷಿಗಳು ಮತ್ತು ಕಂಪನಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ‘ಆನ್‌ಲೈನ್‌ ಉದ್ಯೋಗ ವಿನಿಮಯ’ ಕೇಂದ್ರವನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆರಂಭಿಸಲಿದೆ.

ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್‌ ಮೂಲಕ ತಮ್ಮ ವಿದ್ಯಾರ್ಹತೆ, ಕೌಶಲ, ಉದ್ಯೋಗ ಬಯಸುತ್ತಿರುವ ಕ್ಷೇತ್ರ ಇತ್ಯಾದಿ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಾದ ಬಳಿಕ ವಿನಿಮಯ ಕೇಂದ್ರದ ಮೂಲಕ ಅವರು ನೀಡಿರುವ ಮಾಹಿತಿ ಸರಿ ಇದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಮಾಹಿತಿ ಸರಿ ಇದ್ದವರ ವಿವರಗಳನ್ನು ಸಂಬಂಧಪಟ್ಟ ಕಂಪನಿಗಳಿಗೆ ಕಳುಹಿಸಲಾಗುತ್ತದೆ.

ಅದೇ ರೀತಿ ಯಾವ ಕಂಪನಿಯಲ್ಲಿ ಉದ್ಯೋಗ ಲಭ್ಯವಿದೆ. ಅದಕ್ಕೆ ಬೇಕಾದ ವಿದ್ಯಾರ್ಹತೆ, ಕೌಶಲ, ಅನುಭವ ಇತ್ಯಾದಿ ವಿವರಗಳನ್ನು ವಿನಿಮಯ ಕೇಂದ್ರದ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ನೀಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆಯನ್ನು ತಡೆಯುವುದು, ಉದ್ಯೋಗ ಆಕಾಂಕ್ಷಿಗಳಿಗೆ ಮತ್ತು ಉದ್ಯೋಗ ದಾತರಿಗೆ ನೆರವಾಗುವುದಾಗಿದೆ ಎಂದು ಇಲಾಖೆಯ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಧಾರವಾಡದಲ್ಲಿ ಪ್ರಾಯೋಗಿಕವಾಗಿ ಮಾಡಿದ ಆನ್‌ಲೈನ್‌ ಉದ್ಯೋಗ ಮೇಳ ಯಶಸ್ವಿಯಾಗಿದ್ದು, 300 ರಿಂದ 400 ಮಂದಿಗೆ ಉದ್ಯೋಗ ಸಿಕ್ಕಿದೆ. ಇದರಿಂದ ಉತ್ತೇಜನಗೊಂಡು ಕಾಯಂ ಆಗಿ ಆನ್‌ಲೈನ್‌
ಉದ್ಯೋಗ ಮೇಳ ನಡೆಸಲು ನಿರ್ಧರಿಸಲಾಗಿದೆ. ಯಾವ ಭಾಗದಲ್ಲಿ ಯಾವ ಕೈಗಾರಿಕೆಗಳು, ಕಂಪನಿಗಳು ಇವೆ. ಅಲ್ಲಿರುವ ಉದ್ಯೋಗ ಅವಕಾಶಗಳು, ಸೌಲಭ್ಯಗಳು, ಸೇವಾ ಭದ್ರತೆ ಇತ್ಯಾದಿ ಮಾಹಿತಿಗಳು ದೊರೆಯುವಂತೆ ಮಾಡುತ್ತೇವೆ’ ಎಂದು ಅವರು ವಿವರಿಸಿದರು.

ಶಿಕ್ಷಣ ಸಂಸ್ಥೆಗಳು ಮತ್ತು ಅದಕ್ಕೆ ಹತ್ತಿರದಲ್ಲೇ ಇರುವ ಕೈಗಾರಿಕೆ ಅಥವಾ ಕಂಪನಿಯ ಮ್ಯಾಪ್‌ ಸಿದ್ಧಪಡಿಸಲಾಗುತ್ತದೆ. ಇದರಿಂದ ವ್ಯಾಸಂಗದ ಬಳಿಕ ಹತ್ತಿರದಲ್ಲೇ ಯಾವ ಕಂಪನಿಯಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು ಎಂದು ವಿದ್ಯಾರ್ಥಿಗಳಿಗೆ ಗೊತ್ತಾಗಲಿದೆ. ಅಲ್ಲದೆ ಕಂಪನಿಗಳಿಗೂ ಸಹ ಸಮೀಪದಲ್ಲೇ ಯಾವ ಶಿಕ್ಷಣ ಸಂಸ್ಥೆ ಇದೆ, ಅಲ್ಲಿ ನಮಗೆ ಬೇಕಾದ ಕೌಶಲವುಳ್ಳವರು ದೊರೆಯಲಿದ್ದಾರೆಯೇ ಎಂದು ತಿಳಿಯಲು ಅನುಕೂಲವಾಗಲಿದೆ. 

ಉದ್ಯೋಗ ಆಕಾಂಕ್ಷಿಗಳ ಅನುಭವ, ವಿದ್ಯಾರ್ಹತೆಯ ದಾಖಲೆಗಳು ಮತ್ತು ಕಂಪನಿಯ ನೈಜತೆ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಕೇಂದ್ರವು ಮಾಡಲಿದೆ. ಇದಾದ ಬಳಿಕ ಸಂಬಂಧಪಟ್ಟ ಕಂಪನಿ ನೇರವಾಗಿ ಅಭ್ಯರ್ಥಿಯ ಸಂದರ್ಶನ ನಡೆಸಿ ಉದ್ಯೋಗಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಉದ್ಯೋಗ ಮೇಳ

2026ರ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೆಳ ಆಯೋಜಿಸಲಾಗುತ್ತದೆ. ಜಪಾನ್‌, ಜರ್ಮನಿ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳ ಕಾನ್ಸುಲೇಟ್‌ಗಳ ಜೊತೆ ಮಾತುಕತೆ ನಡೆಸಿದ ಬಳಿಕ ಇದಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ಮನೋಜ್‌ಕುಮಾರ್‌ ಮೀನಾ ತಿಳಿಸಿದರು.

ನರ್ಸಿಂಗ್‌, ಐಟಿಐ, ಡಿಪ್ಲೊಮಾ ಮಾಡಿದವರಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ನಮ್ಮಲ್ಲಿರುವ ಯುವಕ–ಯುವತಿಯರಿಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಉದ್ಯೋಗ ಅವಕಾಶಗಳು ಸಿಗಬೇಕು. ಮಧ್ಯವರ್ತಿಗಳ ಮೂಲಕ ಯಾವುದೇ ರೀತಿಯ ವಂಚನೆ ಆಗಬಾರದು ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಮೀನಾ. 

3 ದಿನ ಶೃಂಗ ಸಭೆ

ಮಾಹಿತಿ ತಂತ್ರಜ್ಞಾನ ಮೇಳದ ಮಾದರಿಯಲ್ಲೇ ನವೆಂಬರ್‌ 4, 5 ಮತ್ತು 6ರಂದು ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಕೌಶಲ ಶೃಂಗ ಸಭೆ ಆಯೋಜಿಸಲಾಗುತ್ತದೆ. ನಾಲ್ಕರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಇನ್ನು ಮುಂದೆ ಪ್ರತಿ ವರ್ಷ ಕೌಶಲ ಶೃಂಗ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಮುಂದಿನ 5–10 ವರ್ಷಗಳಲ್ಲಿ ಯಾವುದಕ್ಕೆ ಬೇಡಿಕೆ ಇರುತ್ತದೆ. ಅದಕ್ಕೆ ತಕ್ಕಂತೆ ಏನೆಲ್ಲ ಬದಲಾವಣೆಗಳು ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.