ಬೆಂಗಳೂರು: ಬಂಡಿಪುರದಲ್ಲಿ ರಾತ್ರಿ 9ರವರೆಗೆ ವಾಹನಗಳ ಸಂಚಾರಕ್ಕೆ ಅನುಮತಿ ಇದೆ. ಆ ಬಳಿಕ ಕೇರಳದಿಂದ ಕರ್ನಾಟಕದ ಕಡೆಗೆ ಎರಡು ಬಸ್ಸುಗಳಿಗೆ ಮತ್ತು ಆಂಬುಲೆನ್ಸ್‌ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
‘ನ್ಯಾಯಾಲಯಗಳ ತಡೆಯಾಜ್ಞೆ ಇದ್ದರೂ ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಅವರ ಒತ್ತಡದ ಮೇಲೆ ಬಂಡೀಪುರ ಮೂಲಕ ಕೇರಳದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆಯೇ’ ಎಂದು ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
‘ರಾತ್ರಿ 9 ರವರೆಗೆ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. 9 ಗಂಟೆ ಬಳಿಕ ಎರಡು ಬಸ್ಸುಗಳಿಗೆ ಮಾತ್ರ ಅವಕಾಶ ನೀಡಿದ್ದೇವೆ. ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಆಂಬುಲೆನ್ಸ್‌ಗಳು ಕೇರಳದಿಂದ ಕರ್ನಾಟಕಕ್ಕೆ ಬರಬೇಕು ಎಂದರೆ ಅದಕ್ಕೂ ಅವಕಾಶವಿದೆ. ಯಾವುದೇ ನಿರ್ಬಂಧವಿಲ್ಲ. ವನ್ಯಜೀವಿ ಸಂರಕ್ಷಣೆಯೂ ಆಗಬೇಕು. ಅಂತರರಾಜ್ಯ ಸಂಬಂಧವೂ ಮುಂದುವರೆಯಬೇಕು ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯಿಂದ ಅಪ ಪ್ರಚಾರ: ‘ಈ ವಿಷಯವಾಗಿ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡಿ ‘ಎಕ್ಸ್’ ಮಾಡಿರುವುದು ಅಕ್ಷಮ್ಯ. ಅವರ ಕಾಲದಲ್ಲೂ ರಾತ್ರಿ ವೇಳೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇತ್ತು. ನನ್ನನ್ನು ಕರ್ನಾಟಕ ಅರಣ್ಯ ಸಚಿವರೋ? ಕೇರಳದ ಅರಣ್ಯ ಸಚಿವರೋ ಎಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಇದಕ್ಕೆ ಕರ್ನಾಟಕದ ಜನತೆಯೇ ತಕ್ಕ ಉತ್ತರ ನೀಡುತ್ತಾರೆ’ ಎಂದು ಖಂಡ್ರೆ ಅವರು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಇಲ್ಲ, ಹೀಗಾಗಿ ಸುಳ್ಳು ಅವರ ಮನೆ ದೇವರಾಗಿದೆ’ ಎಂದು ಖಂಡ್ರೆ ಲೇವಡಿ ಮಾಡಿದ್ದಾರೆ.
‘ಸುದ್ದಿಯನ್ನು ತಿರುಚಿ, ಸುಳ್ಳು ಸುದ್ದಿ ಹಬ್ಬಿಸುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ನಾನು ಗರುಡಾಕ್ಷಿ ವೆಬ್‌ಸೈಟ್ ಚಾಲನೆಯ ಸುದ್ದಿಗೋಷ್ಠಿಯಲ್ಲಿ ನೀಡಿದ ಉತ್ತರದ ದೃಶ್ಯದ ತುಣುಕನ್ನು ಹಂಚಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ ತಂದಿದ್ದು, ಇಂದಿರಾ ಗಾಂಧಿ ಅವರು. ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.