ADVERTISEMENT

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಮಾತ್ರ ಪರಿಗಣನೆ: ಶೀಘ್ರ ತೀರ್ಮಾನ 

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 12:49 IST
Last Updated 5 ಜೂನ್ 2021, 12:49 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ    

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ಇಲ್ಲದೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ, ನೀಟ್ ಅಂಕಗಳನ್ನು ಮಾತ್ರ ಪರಿಗಣಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌ ಕೊಟ್ಟಿರುವ ಸಲಹೆ ಬಗ್ಗೆ ಸದ್ಯದಲ್ಲೇ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸುರೇಶ್‌ ಕುಮಾರ್‌ ಅವರು ಉತ್ತಮ ಸಲಹೆ ನೀಡಿದ್ದಾರೆ. ಎಂಜಿನೀಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಇಂತಿಷ್ಟು ಅಂಕಗಳನ್ನು ಪಡೆಯಬೇಕಾಗಿತ್ತು. ಈಗ ಆ ಅಂಕ ಪರಿಗಣಿಸುವ ಬದಲು ಸಿಇಟಿ ರ‍್ಯಾಂಕ್‌ ಪರಿಗಣಿಸುವ ಸಲಹೆಯನ್ನು ಅವರು ನೀಡಿದ್ದಾರೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು, ಉನ್ನತ ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅಲ್ಲದೆ, ಈ ಬದಲಾವಣೆ ಮಾಡಬೇಕಾದರೆ ಕಾಯ್ದೆಯ ತಿದ್ದುಪಡಿಯನ್ನೂ ಮಾಡಬೇಕು. ಈ ಬಗ್ಗೆ ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆಯೂ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.