ADVERTISEMENT

ಕೋವಿಡ್-19 ಪರಿಸ್ಥಿತಿ; ಭಗವಂತ ಒಬ್ಬನೇ ಕಾಪಾಡಬಲ್ಲ ಎಂದ ಸಚಿವ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 13:50 IST
Last Updated 15 ಜುಲೈ 2020, 13:50 IST
ಆರೋಗ್ಯ ಸಚಿವ ಶ್ರೀರಾಮುಲು
ಆರೋಗ್ಯ ಸಚಿವ ಶ್ರೀರಾಮುಲು   

ಚಿತ್ರದುರ್ಗ: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸುವ ಶಕ್ತಿ ಯಾರ ಕೈಯಲ್ಲಿದೆ ಹೇಳಿ? ಭಗವಂತ ಒಬ್ಬನೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಸಹಾಯಕತೆ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಸೋಂಕು ಎಲ್ಲರಿಗೂ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂತಹದ್ದಲ್ಲ’ ಎಂದು ಬೇಸರ ಹೊರಹಾಕಿದರು.

‘ಕೋವಿಡ್‌ ವಿಚಾರದಲ್ಲಿ ಉಂಟಾಗಿರುತ ತಪ್ಪಿಗೆ ಶಿಕ್ಷೆ ಅನುಭವಿಸಲು, ಪ್ರಾಯಶ್ಚಿತಕ್ಕೆ ಒಳಗಾಗಲು ಸಿದ್ಧರಿದ್ದೇವೆ. ಆದರೆ, ಕಾಂಗ್ರೆಸ್‌ ನಾಯಕರು ಆಧಾರ ರಹಿತವಾಗಿ ಆರೋಪ ಮಾಡಿ ರಾಜಕಾರಣ ಮಾಡಬಾರದು. ಕೂಲಿ ಕಳೆದುಕೊಂಡು ಜನರು ಪರದಾಡುತ್ತಿದ್ದಾರೆ. ಬಡವರ ಹಿತದೃಷ್ಟಿಯಿಂದ ನಾಲಿಗೆ ಬಿಗಿಹಿಡಿದು ಮಾತನಾಡಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ಸಂದಿಗ್ದ ಸ್ಥಿತಿಯಲ್ಲಿ ಆಯುಷ್‌ ಮತ್ತು ಎಂಬಿಬಿಎಸ್‌ ವೈದ್ಯರು ಮುಷ್ಕರಕ್ಕೆ ಇಳಿಯುವುದು ತಪ್ಪಾಗುತ್ತದೆ. ಬೇಡಿಕೆ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಬೆರಳೆಣಿಕೆಯ ಖಾಸಗಿ ಆಸ್ಪತ್ರೆಗಳಿಂದ ಎಲ್ಲರಿಗೂ ಕಳಂಕ ಅಂಟುತ್ತಿದೆ. ಕೋವಿಡ್‌ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ತೋರುವ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿ ಬಿಸಿಮುಟ್ಟಿಸಲಾಗುವುದು’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.