ADVERTISEMENT

ವಿಧಾನಸಭೆಯಲ್ಲಿ ಕೋವಿಡ್‌ ಕೋಲಾಹಲ; ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ

ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಸುಲಿಗೆ, ಆಕ್ಸಿಜನ್‌ ಸಿಲಿಂಡರ್‌ ಕೊರತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 23:30 IST
Last Updated 23 ಸೆಪ್ಟೆಂಬರ್ 2020, 23:30 IST
ವಿದಾನಸಭೆಯಲ್ಲಿ ಬುಧವಾರ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು –ಪ್ರಜಾವಾಣಿ ಚಿತ್ರ
ವಿದಾನಸಭೆಯಲ್ಲಿ ಬುಧವಾರ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ನ್ಯಾಯಾಂಗ ತನಿಖೆ ನಡೆಸಲೇಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದರೆ, ‘ಒಂದು ಪೈಸೆಯೂ ಅವ್ಯವಹಾರ ನಡೆದಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಸುಳ್ಳು ಆರೋಪ ಮಾಡು ತ್ತಿದ್ದು, ನ್ಯಾಯಾಂಗ ತನಿಖೆ ನಡೆಸುವ ಅಗತ್ಯವೇ ಇಲ್ಲ’ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತು.

ವಿಧಾನಸಭೆಯಲ್ಲಿ ಬುಧವಾರ ಸರ್ಕಾರದ ಪರವಾಗಿ ಉತ್ತರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ‘ಖರೀದಿ, ಟೆಂಡರ್‌ಗಳ ಬಗ್ಗೆ ಈ ರೀತಿ ಆರೋಪ ಮಾಡುತ್ತಾ ಬಂದರೆ ಹಿಂದಿನ ಸರ್ಕಾರಗಳು ನಡೆ ಸಿದ ಖರೀದಿಗಳ ಬಗ್ಗೆಯೂ ಪ್ರಶ್ನೆ ಮಾಡಬೇಕಾಗುತ್ತದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ವೆಂಟಿಲೇಟರ್‌ಗಳನ್ನು ₹21 ಲಕ್ಷಕ್ಕೆ ಖರೀದಿ ಮಾಡಲಾಗಿತ್ತು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ಅದನ್ನೂ ತನಿಖೆ ನಡೆಸಿ. ಎರಡೂ ತನಿಖೆಗಳ ಹೊಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗೆ ವಹಿಸಿ’ ಎಂದು ಸವಾಲು ಎಸೆದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ರಾಜ್ಯ ಸರ್ಕಾರದ ಉತ್ತರವನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ADVERTISEMENT

ರೋಗಿಗಳು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ ಕಾಂಗ್ರೆಸ್‌ನ ಹಲವು ಸದಸ್ಯರು, ’ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಆಕ್ಸಿಜನ್‌ ಸಹಿತ ಹಾಸಿಗೆಗಳಿಲ್ಲದೆ ರೋಗಿಗಳು ಸಾಯುತ್ತಿದ್ದಾರೆ. ಇದೊಂದು ಸೋಂಕಿತ ಸರ್ಕಾರ’ ಎಂದು ಕಿಡಿಕಾರಿದರು.

ಮಾರುಕಟ್ಟೆ ದರಕ್ಕೆ ತಕ್ಕಂತೆ ಖರೀದಿ: ಡಾ. ಸುಧಾಕರ್
ಮಾರುಕಟ್ಟೆ ದರಕ್ಕೆ ತಕ್ಕಂತೆ ಖರೀದಿ ಮಾಡಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಸದನಕ್ಕೆ ವಿವರ ನೀಡಿದ ಸಚಿವ ಡಾ. ಸುಧಾಕರ್ ನೀಡಿದ ಸಮರ್ಥನೆ ಹೀಗಿತ್ತು.

* ವೈದ್ಯಕೀಯ ಉಪಕರಣಗಳ ಕೊರತೆ ಇದ್ದಾಗ ದರ ಹೆಚ್ಚಿರುತ್ತದೆ. ಜುಲೈನಲ್ಲಿ ಕಡಿಮೆ ದರದಲ್ಲಿ ಎಂದರೆ, ₹575ಕ್ಕೆ ಪಿಪಿಇ ಕಿಟ್ ಖರೀದಿ ಮಾಡಿದ್ದೆವು. ಹೆಚ್ಚು ದರಕ್ಕೆ ಖರೀದಿ ಮಾಡುವುದಾದರೆ ಪ್ರತಿ ತಿಂಗಳಲ್ಲೂ ಅಧಿಕ ದರಕ್ಕೆ ಖರೀದಿಸಬೇಕಿತ್ತು. ಮೊದಲು ಕೊರತೆ ಇದ್ದಾಗ, 3 ಲಕ್ಷ ಪಿಪಿಇ ಕಿಟ್ ಗಳನ್ನು ಚೀನಾದಿಂದ ತರಿಸಲಾಗಿತ್ತು. ಉಪಕರಣಗಳ ಬೇಡಿಕೆಗೆ ತಕ್ಕಂತೆ ದರ ವ್ಯತ್ಯಾಸವಾಗಿದೆ.

* ಕೋವಿಡ್ ನಿರ್ವಹಣೆಯಲ್ಲಿ ಯಾವ ರಾಜ್ಯದಲ್ಲೂ ಈ ರೀತಿ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಈ ಕುರಿತು ನ್ಯಾಯಾಲಯ, ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿರುವುದರಿಂದ ಅಧಿಕಾರಿಗಳು ದಾಖಲೆ ನೀಡಲು ಅಲೆಯುವಂತಾಗಿದೆ. ಕೋವಿಡ್‌ ವಿರುದ್ಧದ ಹೋರಾಟದ ಮಧ್ಯಭಾಗದಲ್ಲಿದ್ದೇವೆ. ನಾವು ಮೊದಲು ಕೋವಿಡ್ ಸೋಂಕನ್ನು ಮಣಿಸಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು.

* ಮೊದಲಿದ್ದ ಸೌಲಭ್ಯಕ್ಕೆ ಹೋಲಿಸಿದರೆ ಆಕ್ಸಿಜನ್ ಹಾಸಿಗೆಗಳ ಸಂಖ್ಯೆ 6 ಪಟ್ಟು ಹೆಚ್ಚಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆಯನ್ನು 9,095ಕ್ಕೆ ಏರಿಸಲಾಗಿದೆ.

* ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವವರೆಗೆ ಕೋವಿಡ್‌ ನಿಯಂತ್ರಣದಲ್ಲಿತ್ತು. ಮಹಾರಾಷ್ಟ್ರ, ತಮಿಳುನಾಡು ಮತ್ತಿತರ ಕಡೆಗಳಿಂದ ಜನರು ಬಂದಾಗ ಸೋಂಕಿತರ ಸಂಖ್ಯೆ ಹೆಚ್ಚಿತು.

ನಾಲ್ಕು ಪಟ್ಟು ಅಧಿಕ ದರಕ್ಕೆ ಖರೀದಿಸಿದ್ದು ಏಕೆ: ಸಿದ್ದರಾಮಯ್ಯ

* ಪಿಎಂ ಕೇರ್ ಫಂಡ್ ಮೂಲಕ ₹ 4 ಲಕ್ಷಕ್ಕೆ ವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರ ಖರೀದಿಸಿದೆ. ಆಗ ಕೊರೊನಾ ಇರಲಿಲ್ಲ. ಅವರು ಖರೀದಿಸಿದ ವೆಂಟಿಲೇಟರ್‌ಗಳು ಕಳಪೆಯೇ?

* ರಾಜ್ಯ ಸರ್ಕಾರ ವೆಂಟಿಲೇಟರ್‌ಗಳಿಗೆ ₹5 ಲಕ್ಷದಿಂದ ₹18 ಲಕ್ಷದ ವರೆಗೆ ನೀಡಿದೆ. ಹತ್ತಿಪ್ಪತ್ತು ಸಾವಿರ ದರ ಏರಿಕೆಯಾದರೆ ದರ ಏರಿಳಿತ ಎಂದು ಒಪ್ಪಬಹುದು. ನಾಲ್ಕೈದು ಪಟ್ಟು ಹೆಚ್ಚು ಆಗಿರುವುದನ್ನು ಭ್ರಷ್ಟಾಚಾರ ಅನ್ನದೇ ಏನನ್ನಬೇಕು?

*
ಬಳಕೆ ಮಾಡಿದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ನಿಮ್ಮದೇ ಪಕ್ಷದ ಡಾ.ಸಾರ್ವಭೌಮ ಬಗಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರಲ್ಲ. ಇದು ಜನರ ದುಡ್ಡು. ಪ್ರತಿ ಪೈಸೆಗೂ ಲೆಕ್ಕ ನೀಡಬೇಕು.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

**

ಕೋವಿಡ್‌ ರೋಗಿಗಳ ಶೇ 30ರಷ್ಟು ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸುತ್ತೇವೆ ಅನ್ನಿ. ಆಗ ಖಾಸಗಿ ಆಸ್ಪತ್ರೆಗಳು ಕಳುಹಿಸುವ ಬಿಲ್‌ ನೋಡಿದರೆ ಸತ್ಯಾಂಶ ಗೊತ್ತಾಗುತ್ತದೆ.
–ಯು.ಟಿ. ಖಾದರ್‌, ಕಾಂಗ್ರೆಸ್‌ ಸದಸ್ಯ

**
ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ರೋಗಿಗಳು ನಿತ್ಯ ಅಲೆದಾಡಿ ಸಾಯುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಇನ್ನೆಷ್ಟು ಸಮಯ ಬೇಕು.
–ಸೌಮ್ಯಾ ರೆಡ್ಡಿ, ಕಾಂಗ್ರೆಸ್‌ ಸದಸ್ಯೆ

**
ಲಾಕ್‌ಡೌನ್‌ ವೇಳೆಯಲ್ಲಿ ಲಕ್ಷಾಂತರ ಜನರಿಗೆ ಕಿಟ್‌ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದು ಎಂಬತ್ತೇ ಕಿಟ್‌ಗಳು.
–ಬೈರತಿ ಸುರೇಶ್‌, ಕಾಂಗ್ರೆಸ್‌ ಸದಸ್ಯ

**
ಅನ್ಯ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ಕರೆತನ್ನಿ ಎಂದು ಏಪ್ರಿಲ್‌ನಿಂದಲೇ ಸರ್ಕಾರಕ್ಕೆ ಹಲವು ಪತ್ರ ಬರೆದೆ. ಅದಕ್ಕೆ ಸ್ಪಂದಿಸಲಿಲ್ಲ.
–ಪ್ರಿಯಾಂಕ್‌ ಖರ್ಗೆ, ಕಾಂಗ್ರೆಸ್‌ ಸದಸ್ಯ

**
ಕೋವಿಡ್‌ ಬಗ್ಗೆ ಲೆಕ್ಕಪರಿಶೋಧನೆ ನಡೆಸಬೇಡಿ ಎಂದು ಸಿಎಜಿಗೆ ಪತ್ರ ಬರೆಯುತ್ತೀರಲ್ಲ. ಇದೆಂತಹ ಸರ್ಕಾರ.
–ಎಚ್‌.ಕೆ.ಪಾಟೀಲ, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.